ADVERTISEMENT

ಮನುಷ್ಯನಿಗೆ ಆರೋಗ್ಯ ಭಾಗ್ಯ ಮುಖ್ಯ: ಟಿ.ಕೆ.ಯೋಗೇಶ್

ಉಚಿತ ಮೂತ್ರ ರೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 13:32 IST
Last Updated 12 ಏಪ್ರಿಲ್ 2019, 13:32 IST
ಚನ್ನಪಟ್ಟಣದಲ್ಲಿ ನಡೆದ ಉಚಿತ ಮೂತ್ರ ರೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಡಾ.ಮಲವೇಗೌಡ ಮಾತನಾಡಿದರು
ಚನ್ನಪಟ್ಟಣದಲ್ಲಿ ನಡೆದ ಉಚಿತ ಮೂತ್ರ ರೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಡಾ.ಮಲವೇಗೌಡ ಮಾತನಾಡಿದರು   

ಚನ್ನಪಟ್ಟಣ: ಮನುಷ್ಯನಿಗೆ ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಮುಖ್ಯ ಎಂದು ಚನ್ನಪಟ್ಟಣ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಅಂಡ್ ಕಲ್ಚರ್ ಸಂಸ್ಥೆ ಅಧ್ಯಕ್ಷ ಟಿ.ಕೆ.ಯೋಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸಂಸ್ಥೆ ಹಾಗೂ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಮೂತ್ರ ರೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಬಿ.ಜಿ.ಎಸ್. ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ನ ಹಿರಿಯ ಮೂತ್ರರೋಗ ತಜ್ಞ ಡಾ.ಎಸ್.ನರೇಂದ್ರ ಮಾತನಾಡಿ, ಇಂದಿನ ಆಹಾರ ಪದ್ಧತಿ, ಸಕ್ಕರೆ ರೋಗ ಮತ್ತು ಬಿ.ಪಿ. ಒತ್ತಡದಿಂದ ಕಿಡ್ನಿ ಸಮಸ್ಯೆ, ಕಿಡ್ನಿ ವೈಫಲ್ಯ ಹೆಚ್ಚಾಗುತ್ತಿದೆ. ಮೂತ್ರ ರೋಗದ ಬಗ್ಗೆ ಅರಿವು ಮೂಡಿಸಿಕೊಂಡು, ಜಾಗೃತರಾಗಿ, ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಕಾಯಿಲೆ ಬರದಂತೆ ಎಚ್ಚರಿಕೆ ವಹಿಸಬೇಕು. ಜೊತೆಗೆ ಪ್ರಾಥಮಿಕ ಹಂತದಲ್ಲೇ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ADVERTISEMENT

ಪ್ರತಿ ತಿಂಗಳ 2ನೇ ಮತ್ತು 4ನೇ ಬುಧವಾರ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಿಡ್ನಿಯಲ್ಲಿ ಕಲ್ಲು, ಉರಿಮೂತ್ರ, ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜಿಸುವಾಗ ತೊಂದರೆ, ಪ್ರಾಸ್ಪೆಟ್ ತೊಂದರೆಯಿರುವವರು, ಕಿಡ್ನಿ ಕಸಿಯ ಅವಶ್ಯಕತೆ ಇರುವವರು ಈ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಂಸ್ಥೆಯ ಆರೋಗ್ಯ ಸಮಿತಿ ಸದಸ್ಯ ಡಾ.ಮಲವೇಗೌಡ ಮಾತನಾಡಿ, ಮೂತ್ರ ಹಾಗೂ ಕಿಡ್ನಿ ವಿಚಾರದಲ್ಲಿ ಅರಿವಿನ ಕೊರತೆಯಿಂದ ಸಾರ್ವಜನಿಕರು ತೊಂದರೆ ಪಡುತ್ತಿರುವುದನ್ನು ಅರಿತು ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದರು.
ಸಂಸ್ಥೆಯ ಸದಸ್ಯರಾದ ಪ್ರಸನ್ನ, ಪ್ರಮೋದ್, ಸುಜೇಂದ್ರಬಾಬು, ಟಿ.ಕೆ.ವೆಂಕಟೇಶ್ ಪ್ರಸಾದ್ ಭಾಗವಹಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಉಚಿತ ಸಲಹೆ ಮತ್ತು ಔಷಧಿಯನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.