ADVERTISEMENT

‘ತಂಬಾಕು ಸೇವನೆ ಆರೋಗ್ಯಕ್ಕೆ ಕುತ್ತು’

ಶಾಲಾ– ಕಾಲೇಜು ವಿದ್ಯಾರ್ಥಿಗಳಿಂದ ಗುಲಾಬಿ ಚಳುವಳಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:18 IST
Last Updated 8 ಆಗಸ್ಟ್ 2019, 13:18 IST
ತಂಬಾಕು ನಿಯಂತ್ರಣ ಅರಿವು ಕಾರ್ಯಾಗಾರಕ್ಕೆ ಎಎಸ್‌ಐ ಕೋದಂಡ ರಾಮಯ್ಯ ಚಾಲನೆ ನೀಡಿದರು
ತಂಬಾಕು ನಿಯಂತ್ರಣ ಅರಿವು ಕಾರ್ಯಾಗಾರಕ್ಕೆ ಎಎಸ್‌ಐ ಕೋದಂಡ ರಾಮಯ್ಯ ಚಾಲನೆ ನೀಡಿದರು   

ಮಾಗಡಿ: ‘ತಂಬಾಕು ಉತ್ಪನ್ನಗಳ ಸೇವನೆ ದೀರ್ಘಕಾಲದ ಹಲವು ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣ’ ಎಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಅರುಣ್ ಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ತಾಲ್ಲೂಕು ಮಟ್ಟದ ತನಿಖಾದಳದ ಪ್ರಾಧಿಕೃತ ಅಧಿಕಾರಿಗಳಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಟ್ಪಾ-2003 ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಕುರಿತು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ತಂಬಾಕು ಸೇವನೆಯಿಂದಕ್ಯಾನ್ಸರ್‌ಗೆ ಬಲಿಯಾಗಿ ಅಧಿಕ ಸಾವು ನೋವು ಸಂಭವಿಸುತ್ತಿವೆ. ಅದನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಆರೋಗ್ಯಯುತ ಸಮಾಜ ನಿರ್ಮಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕು. ದೇಶದಲ್ಲಿ ತಂಬಾಕು ಬೆಳೆಯುವ 10 ಲಕ್ಷ ರೈತರಿದ್ದಾರೆ. ತಂಬಾಕು ಉತ್ಪನ್ನಗಳ ತಯಾರಿಕಾ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಮತ್ತು ಬೆಳೆಯುವ ರೈತರ ಹಿತದೃಷ್ಟಿಯಿಂದ ಒಮ್ಮೆಲೆ ಉತ್ಪನ್ನಗಳನ್ನು ನಿಲ್ಲಿಸಲಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಕಾರ್ಮಿಕರು ಮತ್ತು ರೈತರ ಆರ್ಥಿಕ, ಸಾಮಾಜಿಕ ಜೀವನದ ಮೇಲೆ ಬೀಳುವ ಹೊಡೆತ ತಡೆಗಟ್ಟಲು ಹಂತಹಂತವಾಗಿ ತಂಬಾಕು ಬೆಳೆಯುವುದು ಮತ್ತು ಉತ್ಪನ್ನಗಳ ತಯಾರಿಕೆಯನ್ನು ನಿಲ್ಲಿಸಲಾಗುತ್ತಿದೆ.ಮಾಗಡಿ ತಾಲ್ಲೂಕನ್ನು ತಂಬಾಕು ಮುಕ್ತವಾಗಿಸಲು ಎಲ್ಲ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್.ರಂಗನಾಥ ಮಾತನಾಡಿ, ‘ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ತಡೆಗಟ್ಟಲು ಈಗಾಗಲೇ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಳಿಗೆಗಳ ಮುಂದೆ ಹೋಗಿ ಗುಲಾಬಿ ಚಳುವಳಿ ನಡೆಸಿದ್ದಾರೆ. ಎಚ್ಚರಿಕೆಯ ನಾಮಫಲಕಗಳಿಲ್ಲದ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ. ಪೊಲೀಸು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜನರಲ್ಲಿ ಅರಿವು ಮೂಡಿಸುವಲ್ಲಿ ಕೈಜೋಡಿಸಿದ್ದಾರೆ’ ಎಂದರು.

ಮೇಲ್ವಿಚಾರಕ ಚಂದ್ರಶೇಖರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್, ಆಡಳಿತಾಧಿಕಾರಿ ಡಾ.ರಾಜೇಶ್‌, ಮಕ್ಕಳ ತಜ್ಞ ವೈದ್ಯ ಡಾ.ವಿವೇಕಾನಂದ, ಡಾ.ರಾಕೇಶ್, ಡಾ.ಜ್ಞಾನಪ್ರಕಾಶ್, ಡಾ.ಸವಿತಾ, ಡಾ.ಪಾರೂಕ್, ಡಾ.ರಫಿಕ್‌, ಡಾ.ಆಶಾ, ಡಾ.ಮದೋಳೆ, ಡಾ.ಯಶವಂತ್‌, ಕುದೂರು ಠಾಣೆಯ ಎಎಸ್‌ಐ ಕೋದಂಡರಾಮಯ್ಯ, ಹಿರಿಯ ಪುರುಷ ಆರೋಗ್ಯ ಸಹಾಯಕ ತುಕಾರಾಮ್, ಪುರಸಭೆ ಅಧಿಕಾರಿ ಶಿವನಂಕೇಗೌಡ, ಉಪತಹಶೀಲ್ದಾರ್ ಡಿ.ಟಿ.ನಾರಾಯಣ್, ಫಾರ್ಮಸಿಷ್ಟ್ ರೇವಪ್ಪ ತಂಬಾಕು ನಿಯಂತ್ರಣದ ಬಗ್ಗೆ ಮಾತನಾಡಿದರು.

ವಿಡಿಯೋ ಪ್ರಾತ್ಯಕ್ಷಿಕೆ ನಡೆಯಿತು. ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.