ADVERTISEMENT

ರಾಮನಗರ | ಹೃದಯಾಘಾತ: 6 ತಿಂಗಳಲ್ಲಿ 20 ಮಂದಿ ಕೊನೆಯುಸಿರು

ಮೃತರಲ್ಲಿ 60–70 ವಯೋಮಾನದವರೇ ಹೆಚ್ಚು; ಹೃದಯ ತಪಾಸಣೆಗೆ ವರವಾದ ಸ್ಟೆಮಿ ಕೇಂದ್ರ

ಓದೇಶ ಸಕಲೇಶಪುರ
Published 6 ಜುಲೈ 2025, 2:11 IST
Last Updated 6 ಜುಲೈ 2025, 2:11 IST
ಹೃದಯಾಘಾತ (ಕಾಲ್ಪನಿಕ ಚಿತ್ರ)
ಹೃದಯಾಘಾತ (ಕಾಲ್ಪನಿಕ ಚಿತ್ರ)   

ರಾಮನಗರ: ಹಿಂದೆ ಅಪರೂಪಕ್ಕೊಮ್ಮೆ ಕೇಳಿ ಬರುತ್ತಿದ್ದ ಹೃದಯಾಘಾತದ ಸಾವುಗಳು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಚಿಕ್ಕ ಮಕ್ಕಳಿಂದಿಡಿದು ಇಳಿ ವಯಸ್ಸಿನವರು ಸಹ ಹೃದಯಾಘಾತಕ್ಕೆ ಊಹಿಸಿಕೊಳ್ಳಲಾಗದ ರೀತಿಯಲ್ಲಿ ಬಲಿಯಾಗುತ್ತಿದ್ದಾರೆ. ಇದೀಗ, ರಾಜ್ಯದಲ್ಲೂ ಹೃದಯಾಘಾತದ ಪ್ರಕರಣಗಳು ಸದ್ದು ಮಾಡುತ್ತಿವೆ. ಅದೇ ರೀತಿ, ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ವಿವಿಧ ವಯೋಮಾನದ 20 ಮಂದಿ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವವರಲ್ಲಿ ವಯಸ್ಕರೇ ಹೆಚ್ಚು ಎಂಬುದು ಗಮನಾರ್ಹ. ಮೃತರ ಪೈಕಿ 60ರಿಂದ 70 ವರ್ಷದೊಳಗಿನವರು 8 ಮಂದಿ, 70–80 ವಯೋಮಾನದವರು ಐವರು, 80–90 ವರ್ಷದವರು 2 ಹಾಗೂ 90 ವರ್ಷ ಮೀರಿದವರು ಒಬ್ಬರಿದ್ದಾರೆ. ಉಳಿದಂತೆ 30–40 ವರ್ಷದೊಳಗಿನವರು 2 ಹಾಗೂ 40–50 ಹಾಗೂ 50–60 ವಯೋಮಾನದವರಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಯುವಜನರಾದಿಯಾಗಿ ಆರೋಗ್ಯವಂತರು ಹಠಾತ್ ಹೃದಯಾಘಾತದಿಂದ ಆಗಿ ಜೀವ ಕಳೆದುಕೊಳ್ಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದೆ. ಹಾಗಾಗಿ, ಅದರ ಲಕ್ಷಣಗಳಿರುವವರು ಆಸ್ಪತ್ರೆಗಳಿಗೆ ಧಾವಿಸಿ ತಪಾಸಣೆಗೆ ಒಳಗಾಗುತ್ತಿದ್ದಾರೆ.

ADVERTISEMENT

ಇದನ್ನು ಮನಗಂಡ ಆರೋಗ್ಯ ಇಲಾಖೆಯು ಎರಡು ವರ್ಷದ ಹಿಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಸ್ಟೆಮಿ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಕೇಂದ್ರಗಳನ್ನು ಆರಂಭಿಸಿದೆ. ಇದು ಬಡವರ ಹೃದಯ ತಪಾಸಣೆಗೆ ವರವಾಗಿದೆ.

ಏನಿದು ಸ್ಟೆಮಿ?:

‘ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭವಾಗಿರುವ ಹೃದಯ ಸ್ನಾಯುವಿನ ಸೋಂಕು ನಿವಾರಣೆಗೆ ಸಂಬಂಧಿಸಿದ ಚಿಕಿತ್ಸೆಯ ಸ್ಟೆಮಿ ತಪಾಸಣಾ ಕೇಂದ್ರಗಳಲ್ಲಿ ಜನರಿಗೆ ಸ್ಥಳೀಯವಾಗಿಯೇ ತುರ್ತು ಚಿಕಿತ್ಸೆ ಸಿಗುತ್ತದೆ. ಹೃದಯಾಘಾತಕ್ಕೆ ಒಳಗಾದವರಿಗೆ ಒಂದು ಗಂಟೆಯೊಳಗೆ ತುರ್ತು ಚಿಕಿತ್ಸೆ ಸಿಗುವುದರಿಂದ ಬದುಕುಳಿಯುವ ಸಾಧ್ಯತೆ ಹೆಚ್ಚು. ಆ ರೀತಿ ತುರ್ತು ಚಿಕಿತ್ಸೆ ವ್ಯವಸ್ಥೆ ಸ್ಟೆಮಿ ಕೇಂದ್ರಗಳಲ್ಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೃದಯಾಘಾತಕ್ಕೆ ಒಳಗಾದವರನ್ನು ಸ್ಟೆಮಿ ಕೇಂದ್ರಗಳಿರುವ ಆಸ್ಪತ್ರೆಗಳಿಗೆ ಕರೆತಂದು ಇಸಿಜಿ ಮಾಡುವಾಗಲೇ, ಆ ಕುರಿತು ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಗೆ ಸಂದೇಶ ರವಾನೆಯಾಗುತ್ತದೆ. ತಕ್ಷಣ ಅಲ್ಲಿನ ತಜ್ಞ ವೈದ್ಯರು ತಾಲ್ಲೂಕು ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ, ಏನೇನು ತುರ್ತು ಚಿಕಿತ್ಸೆ ನೀಡಬೇಕೆಂಬುದರ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ’ ಎಂದು ಹೇಳಿದರು.

‘ಸ್ಟೆಮಿ ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆ ನೀಡಿದ ನಂತರ, ರೋಗಿಯ ಹೃದಯವು ಸುಧಾರಿಸಿಕೊಂಡರೆ ಮುಂದಿನ ಚಿಕಿತ್ಸೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿಯೇ ಮುಂದುವರಿಸಲಾಗುವುದು. ಮತ್ತೇನಾದರೂ ತೊಂದರೆಗಳಿರುವುದು ತಪಾಸಣೆಯಲ್ಲಿ ಕಂಡುಬಂದರೆ ಜಯದೇವ ಹೃದ್ರೋಗ ಸಂಸ್ಥೆಗೆ ರೋಗಿಯನ್ನು ಕಳಿಸಿ ಕೊಡಲಾಗುವುದು’ ಎಂದು ಡಾ. ನಿರಂಜನ್ ತಿಳಿಸಿದರು.

ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಸ್ಟೆಮ್ ಕೇಂದ್ರ

3 ಕಡೆ ವ್ಯವಸ್ಥೆ:

‘ಐದು ತಾಲ್ಲೂಕುಗಳಿರುವ ಜಿಲ್ಲೆಯ ರಾಮನಗರ ಜಿಲ್ಲಾಸ್ಪತ್ರೆ, ಕನಕಪುರ ತಾಲ್ಲೂಕು ಆಸ್ಪತ್ರೆ ಹಾಗೂ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೆಮಿ ವ್ಯವಸ್ಥೆ ಎರಡು ವರ್ಷದ ಹಿಂದೆ ಆರಂಭಿಸಿದೆ. ರಾಮನಗರದಲ್ಲಿ ಕಳೆದ ಆರು ತಿಂಗಳಲ್ಲಿ 2,957 ಮಂದಿಗೆ, ಮಾಗಡಿಯಲ್ಲಿ 3,950 ಹಾಗೂ ಕನಕಪುರದಲ್ಲಿ 3,092 ಇಸಿಜಿ ಮಾಡಲಾಗಿದೆ. ಇದುವರೆಗೆ ಒಟ್ಟು 9,999 ಮಂದಿ ಇಸಿಜಿ ಮಾಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಿರಣ್ ಶಂಕರ್ ಮಾಹಿತಿ ನೀಡಿದರು.

‘ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ, ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಳ್ಳಬೇಕು. ಅನುವಂಶೀಯವಾಗಿ ಹೃದಯಾಘಾತ ಸಂಭವಿಸುತ್ತಿದ್ದರೆ, ಆ ಕುಟುಂಬದವರು ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸಬೇಕು’ ಎಂದು ತಿಳಿಸಿದರು.

ಡಾ. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ
ಜಿಲ್ಲೆಯಲ್ಲಿ ಸದ್ಯ ಮೂರು ಕಡೆ ಮಾತ್ರ ಸ್ಟೆಮಿ ವ್ಯವಸ್ಥೆ ಇದೆ. ಉಳಿದ ತಾಲ್ಲೂಕು ಕೇಂದ್ರಗಳಾದ ಚನ್ನಪಟ್ಟಣ ಹಾರೋಹಳ್ಳಿ ಸೇರಿದಂತೆ ಹೋಬಳಿ ಮಟ್ಟದ ಆಸ್ಪತ್ರೆಗಳಿಗೂ ಸ್ಟೆಮಿ ವ್ಯವಸ್ಥೆಗೆ ಕೋರಿ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
– ಡಾ. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ
2 ವರ್ಷದಲ್ಲಿ 26741 ಮಂದಿಗೆ ಇಸಿಜಿ
ಜಿಲ್ಲೆಯಲ್ಲಿರುವ ಸ್ಟೆಮಿ ಕೇಂದ್ರಗಳಲ್ಲಿ ಕಳೆದೆರಡು ವರ್ಷದಲ್ಲಿ 26741 ಮಂದಿಗೆ ಇಸಿಜಿ ಮಾಡಲಾಗಿದೆ. ಈ ಪೈಕಿ 2023ರ ಏಪ್ರಿಲ್‌ನಿಂದ 2024ರ ಮೇ ತಿಂಗಳವರೆಗೆ 8429 ಮಂದಿ ಹೃದಯ ನೋವಿನ ಕಾರಣಕ್ಕೆ ಇಸಿಜಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಚಿಂತಾಜನಕವಾಗಿದ್ದ 152 ಮಂದಿಯನ್ನು ಜಯದೇವ ಸಂಸ್ಥೆಗೆ ರವಾನಿಸಲಾಗಿತ್ತು. 2024ರ ಏಪ್ರಿಲ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ ಇಸಿಜಿ ಮಾಡಿಸಿಕೊಂಡ 18312 ಮಂದಿ ಪೈಕಿ ಚಿಂತಾಜನಕ ಸ್ಥಿತಿಯಲ್ಲಿದ್ದ 969 ಮಂದಿಯನ್ನು ಜಯದೇವ ಸಂಸ್ಥೆಗೆ ಕಳಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
  • ಎದೆಯಲ್ಲಿ ಅತಿಯಾದ ನೋವು ಅಥವಾ ವಿಪರೀತ ಆಯಾಸ

  • ಎದೆಯಲ್ಲಿ ಕಾಣಿಸಿಕೊಳ್ಳುವ ಒತ್ತಡ, ನೋವು, ಮರಗಟ್ಟುವಿಕೆಯು ನಂತರ

  • ದವಡೆ, ಕುತ್ತಿಗೆ, ಎಡಭುಜದಲ್ಲೂ ಕಾಣಿಸಿಕೊಳ್ಳುವುದು

  • ಏದುಸಿರು ಅಥವಾ ಹೃದಯ ಬಡಿತದಲ್ಲಿ ದಿಢೀರ್ ಹೆಚ್ಚಳ

  • ಉಸಿರಾಟದಲ್ಲಿ ಸಮಸ್ಯೆ, ತಲೆ ತಿರುಗುವುದು

  • ಬೆವರುವುದು, ವಾಂತಿ ಅಥವಾ ವಾಕರಿಕೆ ಬರುವುದು

‘ಯುವಜನ, ಮಧ್ಯ ವಯಸ್ಕರು ಹೆಚ್ಚು ಬಲಿ’
ಕಳೆದ 20 ವರ್ಷಗಳಿಂದಲೂ ಹೃದಯಾಘಾತಗಳು ಸಂಭವಿಸುತ್ತಿವೆ. ಆದರೆ, ಇತ್ತೀಚೆಗೆ ಅವು ಹೆಚ್ಚು ಸುದ್ದಿಯಾಗುತ್ತಿರುವುದರಿಂದ ಜನರಲ್ಲಿ ಆತಂಕದ ಜೊತೆಗೆ ಜಾಗೃತಿಯೂ ಹೆಚ್ಚಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಯುವಜನರು ಹಾಗೂ ಮಧ್ಯ ವಯಸ್ಕರು ಹೃದಯಾಘಾತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಹೃದಘಾತಕ್ಕೆ ಕಾರಣವಾಗುವ ಧೂಮಪಾನ, ರಕ್ತದೊತ್ತಡ, ಮಧುಮೇಹ, ಕಾರ್ಯೋತ್ತಡವವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಹೃದಯಾಘಾತ ಸಂಭವಿಸಿರುವವರಲ್ಲಿ ಶೇ 70ರಷ್ಟು ಮಂದಿಗೆ ನಿಖರ ಕಾರಣವಿದೆ. ಉಳಿದ ಶೇ 30ರಷ್ಟು ಮಂದಿಯಲ್ಲಿ ನಿಖಿರ ಕಾರಣ ಗೊತ್ತಾಗುತ್ತಿಲ್ಲ. ಇದರ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿ ನಾನು ಪ್ರಸ್ತಾಪಿಸಿದ್ದೇನೆ. ವಾಯುಮಾಲಿನ್ಯ, ಸೇವಿಸುವ ತರಕಾರಿ ಸೇರಿದಂತೆ ಇತರ ತಿನಿಸುಗಳಲ್ಲಿ ಬಳಸುವ ಕೃತಕ ಗೊಬ್ಬರ, ಕೀಟನಾಶಕಗಳು ಸಹ ಹೃದಯಾಘಾತವೇ ಕಾರಣವೇ ಎಂಬುದರ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.