ADVERTISEMENT

ವರುಣನ ಅಬ್ಬರ: ಜನಜೀವನ ತತ್ತರ

ಹೆದ್ದಾರಿ ಅಂಡರ್‌ಪಾಸ್‌ಗಳಲ್ಲಿ ನಿಂತ ನೀರು: ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 21:08 IST
Last Updated 27 ಆಗಸ್ಟ್ 2022, 21:08 IST
ರಾಮನಗರ ತಾಲ್ಲೂಕಿನ ಬಿಳಗುಂಬ ಬಳಿ ಹೆದ್ದಾರಿ ಅಂಡರ್‌ಪಾಸ್‌ನಲ್ಲಿ ಕೆಲವು ಅಡಿಗಳವರೆಗೆ ಮಳೆ ನೀರು ನಿಂತಿದ್ದು, ಅದರಲ್ಲೇ ಬೈಕ್‌ ಸವಾರರೊಬ್ಬರು ಸಂಚಾರದ ಸರ್ಕಸ್ ನಡೆಸಿದರು
ರಾಮನಗರ ತಾಲ್ಲೂಕಿನ ಬಿಳಗುಂಬ ಬಳಿ ಹೆದ್ದಾರಿ ಅಂಡರ್‌ಪಾಸ್‌ನಲ್ಲಿ ಕೆಲವು ಅಡಿಗಳವರೆಗೆ ಮಳೆ ನೀರು ನಿಂತಿದ್ದು, ಅದರಲ್ಲೇ ಬೈಕ್‌ ಸವಾರರೊಬ್ಬರು ಸಂಚಾರದ ಸರ್ಕಸ್ ನಡೆಸಿದರು   

ರಾಮನಗರ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಮಳೆಯ ಅಬ್ಬರ ಜೋರಾಗಿದ್ದು, ರಾಮನಗರದಲ್ಲೂ ಉತ್ತಮ ವರ್ಷಧಾರೆಯಾಯಿತು. ಕೆರೆಗಳು ಕೋಡಿ ತುಂಬಿ ಹರಿದಿದ್ದು, ಹೊಲ–ಗದ್ದೆಗಳಿಗೆ ನೀರು ನುಗ್ಗಿತ್ತು.

ಬೆಂಗಳೂರು–ಮೈಸೂರು ಹತ್ತು ಪಥಗಳ ಹೆದ್ದಾರಿಯು ಈಗಷ್ಟೇ ಹಂತಹಂತವಾಗಿ ಸಂಚಾರಕ್ಕೆ ಮುಕ್ತಗೊಳ್ಳುತ್ತಿದ್ದು, ಈ ನಡುವೆ ಅವೈಜ್ಞಾನಿಕ ಅಂಡರ್‌ಪಾಸ್‌ಗಳ ನಿರ್ಮಾಣ ತಲೆನೋವಾಗಿದೆ. ಶುಕ್ರವಾರ ರಾತ್ರಿ ಭಾರಿ ಮಳೆಯಿಂದಾಗಿ ಅಂಡರ್‌ಪಾಸ್‌ಗಳು ಜಲಾವೃತಗೊಂಡು ವಾಹನ ಸವಾರರು ಪರದಾಟ ನಡೆಸಿದರು.

ಬಸವನಪುರ ಬಳಿ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದರು. ಬಿಳಗುಂಬ, ಜಯಪುರ ಸೇರಿದಂತೆ ವಿವಿಧೆಡೆಯೂ ಮಳೆ ನೀರು ನಿಂತಿದ್ದು, ಸುತ್ತಲಿನ ಜಮೀನುಗಳಿಗೂ ನುಗ್ಗಿತ್ತು. ಕುಂಬಳಗೋಡು ಸಮೀಪದ ಕಣಮಿಣಿಕೆ ಗ್ರಾಮದ ಬಳಿ ಹೆದ್ದಾರಿಗೆ ಕೆರೆ ನೀರು ನುಗ್ಗಿದ್ದು, ಇದರಿಂದಾಗಿ ಹಲವು ಗಂಟೆಗಳವರೆಗೆ ಸಂಚಾರ ಅಸ್ತವ್ಯಸ್ತವಾಗಿತ್ತು. ಜೆಸಿಬಿ ಯಂತ್ರಗಳನ್ನು ಬಳಸಿ ನೀರಿನ ಹರಿವಿಗೆ ವ್ಯವಸ್ಥೆ ಮಾಡಲಾಯಿತು.

ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿಯ ಅಲಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ಕಾಲ ಪ್ರಯಾಣಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಮಂಚನಬೆಲೆ ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಅರ್ಕಾವತಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ರಾಮನಗರ ವ್ಯಾಪ್ತಿಯ ಸೀರಳ್ಳದಲ್ಲಿ ನೀರಿನ ಹರಿವು ಹೆಚ್ಚಾದ ಕಾರಣಕ್ಕೆ ಟಿಪ್ಪು ನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ನೀರು ನುಗ್ಗಿ ಪರದಾಡುವಂತೆ ಆಯಿತು. ರಾಮನಗರದ ರೈಲ್ವೆ ಅಂಡರ್‌ಪಾಸ್‌ ಬಳಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಯಿತು.

ಬಿಡದಿ ಹೋಬಳಿ ಐನೋರಪಾಳ್ಯದ ಬಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪಿದೆ. ಪರಸನಪಾಳ್ಯ ಗ್ರಾಮದ ಸಮೀಪ ಚಿಕ್ಕಹೊಳೆಯಲ್ಲಿ ಪ್ರವಾಹ ಬಂದ ಪರಿಣಾಮ ಗ್ರಾಮದ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ.

ಮಳೆಗೆ ಜನಜೀವನ ಅಸ್ತವ್ಯಸ್ತ

ಬಿಡದಿ ವರದಿ: ಬಿಡದಿಯ ಪ್ರಮುಖ ಕರೆಗಳಲ್ಲಿ ಒಂದಾದ ನೆಲ್ಲಿಗುಡ್ಡೆ ಕೆರೆ ಕೋಡಿ ಬಿದ್ದು ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನೀರಿನ ರಭಸಕ್ಕೆ ಬಿಡದಿ ಮತ್ತು ಬಾನಂದೂರು ತಾತ್ಕಾಲಿಕ ಸೇತುವೆ ಸಂಪೂರ್ಣ
ಕೊಚ್ಚಿ ಹೋಗಿದೆ. ಇದರಿಂದ ಬಾನಂದೂರು, ಗೊಲ್ಲಹಳ್ಳಿ, ಇಟ್ಟಮಡು, ರಾಮನಹಳ್ಳಿ ನಡುವೆ ಸಂಪರ್ಕ ಕಡಿತಗೊಂಡಿದೆ.

ಬಾನಂದೂರಿನಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿ ದೇಗುಲ ಮುಳುಗಡೆಯಾಗಿದ್ದು, ಅರ್ಚಕರ ಮನೆಗೆ ಕೂಡ ನೀರಿನಲ್ಲಿ ಮುಳಗಿದೆ. ಇದೇ ಗ್ರಾಮದ ಬಿಜಿಎಸ್ ಶಾಲೆಗೂ ನೀರು ನುಗ್ಗಿದೆ. ವಾಜರಹಳ್ಳಿ ಮತ್ತು ಕೇತಗಾನಹಳ್ಳಿ ಸಂಪರ್ಕಿಸುವ ಸೇತುವೆ ಸಂಪೂರ್ಣ ಜಲಾವೃತ
ಗೊಂಡಿದ್ದು, ಶಾಸಕ ಎ.ಮಂಜುನಾಥ್ ಅವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.