ರಾಮನಗರ: ರಾಜ್ಯ ಸರ್ಕಾರದ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯನ್ನು ಪ್ರಸ್ತುತ ಸಾಲಿನಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸಲು ಸ್ಥಾಪಿಸಲಾಗಿರುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು ಹಾಗೂ ಕೃಷಿ ಯಂತ್ರಧಾರೆ ಕೇಂದ್ರಗಳೊಂದಿಗೆ ಇತರ ಸಂಘ–ಸಂಸ್ಥೆಗಳು/ರೈತ ಉತ್ಪಾದಕ ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿಗಳಿಗೂ ಹಬ್ ಸ್ಥಾಪಿಸಲು ಅವಕಾಶ ನೀಡಲಾಗಿರುತ್ತದೆ.
ಹಬ್‌ಗಳನ್ನು ಬೆಳೆ ವಿಧ ಮತ್ತು ಕಟಾವು ಅವಧಿಯ ಆಧಾರದ ಮೇಲೆ ಸ್ಥಾಪಿಸಲಾಗುವುದು. ಈ ಯಂತ್ರೋಪಕರಣಗಳು ಯಾವುದೇ ತಾಲ್ಲೂಕು ಹಾಗೂ ಹೋಬಳಿಗಳಿಗೆ ಸೀಮಿತವಾಗಿರದೆ, ಬೇಡಿಕೆ ಅನುಸಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಅನುಮೋದನೆ ಪಡೆದು ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಬಹುದಾಗಿರುತ್ತದೆ.
ಹಬ್‌ಗಳನ್ನು ಅನುಷ್ಠಾನ ಮಾಡಲು ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳು, ಸೇವಾಧಾರ ಸಂಸ್ಥೆಗಳು, ವೈಯಕ್ತಿಕ ಫಲಾನುಭವಿಗಳು ಹಾಗೂ ನೋಂದಾಯಿತ ಸಂಘ–ಸಂಸ್ಥೆಗಳು/ ರೈತ ಉತ್ಪಾದಕ ಸಂಸ್ಥೆಗಳು ಭಾಗವಹಿಸಬಹುದಾಗಿರುತ್ತದೆ. ಸಾಮಾನ್ಯ ರೈತರಿಗೆ ಗರಿಷ್ಠ ಶೇ 50ರಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ ಶೇ 70ರಷ್ಟು ಹಾಗೂ ಸಂಘ–ಸಂಸ್ಥೆಗಳಿಗೆ ಗರಿಷ್ಠ ಶೇ 70ರಷ್ಟು ಸಹಾಯಧನ ನೀಡಲಾಗುವುದು.
ಯೋಜನೆಯಡಿ ಕಂಬೈನ್ಡ್ ಹಾರ್ವೆಸ್ಟರ್, ಶುಗರ್‌ಕೇನ್ ಹಾರ್ವೆಸ್ಟರ್, ಟ್ರಾಕ್ಟರ್ ಆಪರೇಟೆಡ್ ಬೇರ‍್ಸ್, ಸೆಲ್ಫ್ ಪ್ರಾಪೆಲ್ಲಡ್ ರಿಪರ‍್ಸ್, ಟ್ರಾಕ್ಟರ್ ಆಪರೇಟೆಡ್ ಹೇ ರೇಕ್, ಸಿಲಗೆ ಮೇಕಿಂಗ್ ಮಷಿನ್, ರೈಸ್ ಸ್ಟ್ರಾ ಚಾಪರ್, ಟ್ರಾಕ್ಟರ್ ಆಪರೇಟೆಡ್ ಮಲ್ಚರ್, ಇರ್ರಾ ರೋಟಾವೇಟರ್ ಮುಂತಾದವುಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು ಅವಕಾಶವಿರುತ್ತದೆ.
ಆಯ್ಕೆಯಾದ ಫಲಾನುಭವಿಗಳು ಅಥವಾ ಸಂಘ–ಸಂಸ್ಥೆಗಳು ಕೃಷಿ ಮೂಲಸೌಕರ್ಯದ ನಿಧಿ ಸಾಲದ ನೆರವು ಸಹ ಪಡೆಯಲು ಅವಕಾಶವಿರುತ್ತದೆ. ಹೈಟೆಕ್ ಹಾರ್ವೆಸ್ಟರ್ ಹಬ್‌ನಲ್ಲಿ ದಾಸ್ತಾನೀಕರಿಸಿರುವ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ಕಾರಿಡಾರ್‌ನಲ್ಲಿ ಬರುವ ರೈತರಿಗೆ ಒದಗಿಸಲಾಗುವುದು.
ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ಶೇ 50ರ ಸಹಾಯಧನ (ಗರಿಷ್ಠ ₹40 ಲಕ್ಷ) ಹಾಗೂ ಸಂಘ–ಸಂಸ್ಥೆಗಳಿಗೆ ಶೇ 70ರ ಸಹಾಯಧನ (ಗರಿಷ್ಠ ₹50 ಲಕ್ಷ) ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.