ಮಾಗಡಿ: ಸಚಿವ ಸಂಪುಟದಲ್ಲಿ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲು ಒಪ್ಪಿಗೆ ನೀಡಿರುವುದನ್ನು ತಾಲ್ಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಭಾನುವಾರ ಪಟ್ಟಣದಲ್ಲಿ ನಡೆದ ವಿವಿಧ ಸಂಘಟನೆಗಳ ವತಿಯಿಂದ ಸೋಲೂರು ಉಳಿಯುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ತಾ.ಪಂ.ಮಾಜಿ ಸದಸ್ಯ ಮಾಡಬಾಳ್ ಜಯರಾಂ ಮಾತನಾಡಿ, ಸೋಲೂರು ಹೋಬಳಿ ಮಾಗಡಿ ತಾಲ್ಲೂಕಿಗೆ ಕಳಸವಿದ್ದಂತೆ. ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜನ್ಮಸ್ಥಳ ಹಾಗೂ ನಾಡಪ್ರಭು ಕೆಂಪೇಗೌಡ ಆಳ್ವಿಕೆಯ ಸ್ಥಳ ಜತೆಗೆ ಹಲವು ಮಠಗಳು ಸೋಲೂರು ಹೋಬಳಿ ವ್ಯಾಪ್ತಿಯಲ್ಲಿವೆ.
ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಇರುವುದರಿಂದ ಇಲ್ಲಿನ ಭೂಭಾಗಕ್ಕೆ ಹೆಚ್ಚಿನ ಮಹತ್ವವಿದೆ. ಇಲ್ಲಿನ ರಾಜಸ್ವ ಸುಂಕದಿಂದ ತಾಲ್ಲೂಕಿಗೆ ಆದಾಯ ಹೆಚ್ಚಿದೆ. ನೆಲಮಂಗಲ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ ಹಲವರು ಶಾಸಕರಾಗಿ, ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಇಂತಹ ದುಷ್ಕೃತ್ಯಕ್ಕೆ ಕೈಹಾಕಿರಲಿಲ್ಲ. ಈಗಿನ ಶಾಸಕ ಎನ್.ಶ್ರೀನಿವಾಸ್ ಗುತ್ತಿಗೆದಾರ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಮುನ್ಸೂಚನೆ ಇದ್ದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗುವಂತೆ ರಾಜಕೀಯ ಒತ್ತಡ ಹೇರಿ ಸೇರ್ಪಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಚಿವ ಸಂಪುಟ ಸಭೆಯಲ್ಲಿ ಚುಕ್ಕೆ ಗುರುತಿನಲ್ಲಿ ವಿಷಯ ಪ್ರಸ್ತಾಪಿಸಿ ಸೋಲೂರು ಭೂ ಭಾಗವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಈ ಕೃತ್ಯಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಜಾನಪದ ಕಲಾವಿದ ಗಾಯಕ ಕನ್ನಡ ಕುಮಾರ್ ಮಾತನಾಡಿ, ರಾಜಕೀಯವಾಗಿ ಯಾವುದೇ ಲಾಭ ಇಲ್ಲ ಎಂದು ರಾಜಕಾರಣಿಗಳು ತಮ್ಮ ವ್ಯಾಪ್ತಿಯ ಭೂಭಾಗ ಬಿಟ್ಟು ಕೊಡುತ್ತಿದ್ದಾರೆ. ಈ ಹಿಂದೆ ತಾವರೆಕೆರೆ ಹೋಬಳಿ ಕೂಡ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿಯೇ ಇತ್ತು. ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ ನಂತರ ಅಲ್ಲಿಯ ರೈತರು ಇಂದಿಗೂ ತಮ್ಮ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕಾರಣಿಗಳು ರೈತರಿಗೆ ಒಂದಿಷ್ಟು ಹಣ ನೀಡಿ ಅವರ ಜಮೀನು ಕುಸಿದುಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ಗ್ಯಾರಂಟಿ ಅನುಷ್ಠಾನಗಳ ಸಮಿತಿ ತಾಲ್ಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ ಮಾತನಾಡಿ, ಜನಪ್ರತಿನಿಧಿಗಳು ನೆಲಮಂಗಲ ತಾಲ್ಲೂಕಿಗೆ ವಿಲೀನಗೊಳಿಸುತ್ತಿರುವುದು ಅರಿವಿನಲ್ಲಿದ್ದರೂ ಮೌನವಹಿಸಿರುವುದು ಸರಿಯಲ್ಲ. ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ತಿ.ನಾ.ಪದ್ಮನಾಭ್, ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಶ್ರೀನಿವಾಸ್, ವಿದ್ಯಾರ್ಥಿ ಮಿತ್ರ ಕಿರಣ್, ನೇತೇನಹಳ್ಳಿ ದಿನೇಶ್, ಶ್ರೀಪತಿಹಳ್ಳಿ ರಾಜು ಮಾತನಾಡಿದರು.
ಗೋ ಸಂರಕ್ಷಣಾ ವೇದಿಕೆ ಶಿವಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ್, ಆಗ್ರೋ ಪುರುಷೋತ್ತಮ್, ಮಹಾಂತೇಶ್, ಶಿವಲಿಂಗಯ್ಯ, ವೆಂಕಟೇಶ್ ಸೇರಿದಂತೆ ಭಾಗವಹಿಸಿದ್ದರು.
ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧಾರ
ಸೋಲೂರು ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಜಿಲ್ಲಾಧಿಕಾರಿ ಕಚೇರಿಗೆ 60 ರಿಂದ 80 ಕಿಲೋಮೀಟರ್ ದೂರವಿದೆ. ನೆಲಮಂಗಲಕ್ಕೆ ಸೇರಿಸುವುದರಿಂದ ಸಾಮಾನ್ಯ ರೈತರಿಗೆ ಯಾವುದೇ ಅನುಕೂಲವಿಲ್ಲ. ಕೇವಲ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಈಗ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದ್ದು ಮುಂದಿನ ದಿನಗಳಲ್ಲಿ ಗೆಜೆಟ್ ನೋಟಿಫಿಕೇಶನ್ ಮತ್ತು ರಾಜ್ಯಪಾಲರ ಅಂಕಿತ ಮುಖ್ಯವಾಗುತ್ತದೆ. ಸರ್ಕಾರದ ಮೇಲೆ ಒತ್ತಡ ತಂದು ಈ ಪ್ರಕ್ರಿಯೆ ನಿಲ್ಲಿಸಲು ಅವಕಾಶವಿದೆ. ಎಚ್.ಸಿ.ಬಾಲಕೃಷ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.