ADVERTISEMENT

ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 2:56 IST
Last Updated 23 ಫೆಬ್ರುವರಿ 2021, 2:56 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ರಾಮನಗರ: ‘ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಈ ಹಗರಣ ಹೊರಬಂದಿದ್ದೇ ನನ್ನ ಆಡಳಿತದ ಅವಧಿಯಲ್ಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಐಎಂಎ ಹಗರಣದ ಆರೋಪಿಗಳಿಂದ ಕೆಲವರು ಕುಮಾರಸ್ವಾಮಿ ಹೆಸರಿನಲ್ಲಿ ಹಣ ಪಡೆದಿದ್ದಾರೆ ಎನ್ನುವ ಆರೋಪ ಕುರಿತು ನಗರದಲ್ಲಿ ಭಾನುವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು.

‘ಒಮ್ಮೆ ಶಾಸಕ ರೋಷನ್‌ ಬೇಗ್‌ ಇಫ್ತಾರ್‌ ಕೂಟಕ್ಕೆ ಬರಲೇಬೇಕು ಎಂದು ನನ್ನನ್ನು ಕರೆದೊಯ್ದರು. ಅಲ್ಲಿ ಇಬ್ಬರು ಅಪರಿಚಿತರಿದ್ದರು. ‘ಇವರು ಮಹಾನ್‌ ದಾನಿಗಳು. ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ದಾನ ಮಾಡಿದ್ದಾರೆ’ ಎಂದು ಪರಿಚಯಿಸಿದ್ದರು. ಅಲ್ಲಿ ನಾನು ಕೇವಲ ಐದು ನಿಮಿಷ ಇದ್ದೆ. ಪೊಲೀಸ್‌ ಅಧಿಕಾರಿಗಳೂ ನನ್ನ ಜೊತೆಯಲ್ಲಿ ಇದ್ದರು’ ಎಂದು ಸ್ಪಷ್ಟನೆ ನೀಡಿದರು.

‘ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಐಎಂಎ ಕುರಿತು ದೂರುಗಳು ಕೇಳಿಬಂದಿದ್ದು, ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದೆ. ಅಷ್ಟರಲ್ಲಿ ಆರೋಪಿ ದೇಶ ಬಿಟ್ಟು ತೆರಳಿದ್ದ. ನಮ್ಮ ಅಧಿಕಾರಿಗಳು ಆತನನ್ನು ಬಂಧಿಸಿ ಕರೆತಂದಿದ್ದರು’ ಎಂದು ವಿವರಿಸಿದರು.

ADVERTISEMENT

ಮೀಸಲಾತಿಗಾಗಿ ಒಕ್ಕಲಿಗರ ಹೋರಾಟದ ಕುರಿತು ಪ್ರತಿಕ್ರಿಯಿಸಿ, ‘ಸದ್ಯ ಈ ಹೋರಾಟಗಳು ದಾರಿ ತಪ್ಪುತ್ತಿದ್ದು, ಒಂದು ವರ್ಗ ರಾಜಕೀಯವಾಗಿ ಸ್ಥಾನಮಾನ ಪಡೆಯಲು ಹೊರಟಿದೆ. ಇಂತಹ ವಿಚಾರಗಳಲ್ಲಿ ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸಿ ಸಂಘರ್ಷ ಉಂಟು ಮಾಡಲು ನನಗೆ ಇಷ್ಟ ಇಲ್ಲ. ಈ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.