ADVERTISEMENT

ಇಂದಿನ ಆಹಾರ ಪದ್ಧತಿಯಿಂದ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 13:50 IST
Last Updated 21 ಆಗಸ್ಟ್ 2019, 13:50 IST
ಚನ್ನಪಟ್ಟಣದ ಮಂಗಳವಾರಪೇಟೆಯ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಆಯುಷ್ ಆರೋಗ್ಯ ಕಾರ್ಯಕ್ರಮದಲ್ಲಿ ಡಾ.ಸಿ.ಚಂದ್ರಕಲಾ ಭಾಗವಹಿಸಿದ್ದರು
ಚನ್ನಪಟ್ಟಣದ ಮಂಗಳವಾರಪೇಟೆಯ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಆಯುಷ್ ಆರೋಗ್ಯ ಕಾರ್ಯಕ್ರಮದಲ್ಲಿ ಡಾ.ಸಿ.ಚಂದ್ರಕಲಾ ಭಾಗವಹಿಸಿದ್ದರು   

ಚನ್ನಪಟ್ಟಣ: ‘ಇಂದಿನ ಆಹಾರ ಪದ್ಧತಿಯಿಂದ ಹಲವಾರು ರೋಗಗಳು ಮನುಷ್ಯನನ್ನು ಕಾಡುತ್ತಿವೆ’ ಎಂದು ಆಯುರ್ವೇದ ವೈದ್ಯಾಧಿಕಾರಿ ಡಾ.ಸಿ.ಚಂದ್ರಕಲಾ ಅಭಿಪ್ರಾಯಪಟ್ಟರು.

ಪಟ್ಟಣದ ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ರಾಮನಗರ ಇವರು ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿ ಮಂಗಳವಾರ ಏರ್ಪಡಿಸಿದ್ದ 2019-20ನೇ ಸಾಲಿನ ಶಾಲಾ ಆಯುಷ್ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಆಹಾರ ಪದ್ಧತಿಯಿಂದ ದೇಹದ ಮೇಲೆ ಹಲವಾರು ದುಷ್ಪರಿಣಾಮಗಳು ಆಗುತ್ತಿವೆ. ಇದರಿಂದ ಮಾನವ ಹಲವಾರು ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ ಎಂದರು.

ADVERTISEMENT

‘ಆಹಾರವನ್ನು ಚೆನ್ನಾಗಿ ಅಗಿದು ನುಂಗಬೇಕು. ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯಬೇಕು. ಊಟದ ಜತೆ ತರಕಾರಿ ಸೇವನೆ ಮಾಡಬೇಕು. ನಾರಿನಂಶವಿರುವ ಹಸಿ ತರಕಾರಿಗಳನ್ನು ಸೇವಿಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ದೇಹದ ತೂಕವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಅಧಿಕ ಕೊಬ್ಬಿರುವ ಮಾಂಸವನ್ನು ಸೇವನೆ ಮಾಡಬಾರದು. ಧೂಮಪಾನ ಮತ್ತು ಮದ್ಯಪಾನ ಹಾಗೂ ಕರಿದ ಪದಾರ್ಥಗಳನ್ನು ಸೇವಿಸುವುದರಿಂದ ಎಂತಹ ದುಷ್ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

ಆಯುಷ್ ವೈದ್ಯಾಧಿಕಾರಿ ಡಾ.ಕೋಮಲಾ ಮಾತನಾಡಿ, ‘ಯುನಾನಿ ವೈದ್ಯ ಪದ್ಧತಿಯಲ್ಲಿ ಬಳಸುವಂತಹ ಗಿಡಮೂಲಿಕೆ ಹಾಗೂ ತರಕಾರಿಗಳಾದ ತೊಂಡೆಕಾಯಿ, ಬೇವು, ಹಾಗಲಕಾಯಿ, ನೆಲ್ಲಿಕಾಯಿ, ಅಮೃತಬಳ್ಳಿ, ಕರಿಬೇವು, ಮೆಂತ್ಯೆ, ನೇರಳೆಹಣ್ಣು ಮುಂತಾದ ವಸ್ತುಗಳನ್ನು ಆಹಾರದ ಜೊತೆ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು’ ಎಂದು ವಿವರಿಸಿದರು.

ಯುನಾನಿ ವೈದ್ಯಾಧಿಕಾರಿ ಡಾ.ಎ.ಆರ್. ಪದ್ಮಜ, ಶಾಲೆಯ ಮುಖ್ಯಶಿಕ್ಷಕ ಎಸ್.ತಿಮ್ಮರಾಜು, ತಾಲ್ಲೂಕು ಸೆಕೆಂಡರಿ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಜಿ.ಕೆ.ರಂಗನಾಥ, ಹಿರಿಯ ಶಿಕ್ಷಕರಾದ ತಾರಾ ವಿ ಹೆಗಡೆ, ಅನುಸೂಯ, ಭವ್ಯಶ್ರ್ರೀ, ಪುಟ್ಟಪ್ಪ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.