ADVERTISEMENT

ಬಂಜೆತನ ನಿವಾರಣೆಗೆ ವೈದ್ಯರ ಸಲಹೆ ಅಗತ್ಯ

ರೋಟರಿ ಕ್ಲಬ್‌ನಿಂದ ತ‍ಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 3:46 IST
Last Updated 9 ಆಗಸ್ಟ್ 2021, 3:46 IST
ರೋಟರಿ ಭವನದಲ್ಲಿ ನಡೆದ ಬಂಜೆತನ ತಪಾಸಣಾ ಶಿಬಿರವನ್ನು ರೋಟರಿ ಟ್ರಸ್ಟ್‌ ಅಧ್ಯಕ್ಷ ಎಂ.ಡಿ. ವಿಜಯದೇವು ಉದ್ಘಾಟಿಸಿದರು
ರೋಟರಿ ಭವನದಲ್ಲಿ ನಡೆದ ಬಂಜೆತನ ತಪಾಸಣಾ ಶಿಬಿರವನ್ನು ರೋಟರಿ ಟ್ರಸ್ಟ್‌ ಅಧ್ಯಕ್ಷ ಎಂ.ಡಿ. ವಿಜಯದೇವು ಉದ್ಘಾಟಿಸಿದರು   

ಕನಕಪುರ: ‘ಮಕ್ಕಳಾಗದಿರುವಿಕೆಗೆ ಮಹಿಳೆಯೇ ಕಾರಣ ಎನ್ನುವುದು ತಪ್ಪು. ಇದಕ್ಕೆ ಪತಿ ಮತ್ತು ಪತ್ನಿ ಇಬ್ಬರಲ್ಲೂ ಸಮಸ್ಯೆ ಇರಬಹುದು. ಅದನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದಾಗ ಮಕ್ಕಳಾಗುವ ಸಾಧ್ಯತೆ ಇರುತ್ತದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ತಿಳಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ಬೆಂಗಳೂರು ಐಕ್ಯ ಫರ್ಟಿಲಿಟಿ ಮತ್ತು ರೀಸರ್ಚ್‌ ಸೆಂಟರ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಬಂಜೆತನ ನಿವಾರಣಾ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಪ್ರತಿಯೊಂದು ಕುಟುಂಬಕ್ಕೂ ಮಗುವಿನ ಅಪೇಕ್ಷೆ ಇರುತ್ತದೆ. ಆ ಕುಟುಂಬಕ್ಕೆ ಮಗು ಆಗದಿದ್ದಾಗ ನಿರಾಸೆಯ ಜೊತೆಗೆ ಸಾಮಾಜಿಕ ನಿಂದನೆ ಎದುರಾಗುತ್ತದೆ. ಅಂತಹ ಸಮಸ್ಯೆ ನೀಗಿಸಲು ತಾಲ್ಲೂಕಿನ ಜನತೆಗಾಗಿ ರೋಟರಿ ಕ್ಲಬ್‌ ಇಂತಹ ಸೇವಾ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯವಾದುದು ಎಂದರು.

ADVERTISEMENT

ಸ್ತ್ರೀರೋಗದ ಬಗ್ಗೆ ಲಂಡನ್‌ನಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಖ್ಯಾತ ವೈದ್ಯರಾಗಿ ತಾಯ್ನಾಡಿನ ಜನರಿಗೆ ಸೇವೆ ಒದಗಿಸುತ್ತಿರುವ ಡಾ.ಸುನೀಲ್‌ ಈಶ್ವರ್‌ ಮತ್ತು ಡಾ.ಸ್ಮೃತಿ ಡಿ. ನಾಯಕ್‌ ಅವರು ಹುಟ್ಟೂರಿನ ಜನತೆಯ ಋಣ ತೀರಿಸಲು ಮುಂದಾಗಿದ್ದಾರೆ. ಇಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ ನಡೆಸುತ್ತಿದ್ದಾರೆ. ಇದು ತಾಲ್ಲೂಕಿನ ಜನರ ಸೌಭಾಗ್ಯ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವೈದ್ಯ ಡಾ.ಸುನೀಲ್‌ ಈಶ್ವರ್‌ ಮಾತನಾಡಿ, ದಂಪತಿಯಲ್ಲಿ ಮಕ್ಕಳಾಗದಿರುವುದು ದೊಡ್ಡ ಸಮಸ್ಯೆಯಲ್ಲ. ಶಾಪವೂ ಅಲ್ಲ. 30 ವರ್ಷದೊಳಗೆ ವಿವಾಹವಾಗಿ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೇಗನೆ ವಿವಾಹವಾಗುವವರು ಯೋಜನೆ ಮಾಡುವುದಾದರೆ ವೈದ್ಯರ ಸಲಹೆ ಪಡೆದು ಮಾಡಬೇಕು. ಸರಿಯಾದ ಕ್ರಮ ಇಲ್ಲದೆ ಮಾಡುವುದರಿಂದ ಮುಂದೆ ಶಾಶ್ವತವಾಗಿ ಮಕ್ಕಳಾಗದಿರಬಹುದು ಎಂದು ಎಚ್ಚರಿಸಿದರು.

ಮಕ್ಕಳು ಆಗದಿರುವುದಕ್ಕೆ ಪುರುಷ ಮತ್ತು ಸ್ತ್ರೀ ಇಬ್ಬರು ಕಾರಣರಾಗಿರುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯಿಂದಲೇ ಮಕ್ಕಳು ಆಗುವುದಿಲ್ಲವೆಂದು ಬಲವಾಗಿ ನಂಬಿರುತ್ತಾರೆ. ಮಹಿಳೆಯರು ಇಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳುವುದಕ್ಕಿಂತ ಅಕ್ಕಪಕ್ಕದವರು ಉಚಿತವಾಗಿ ನೀಡುವ ಸಲಹೆ ಪಾಲಿಸುತ್ತಾರೆ. ಇದರಿಂದ ಭವಿಷ್ಯದಲ್ಲಿ ಮಕ್ಕಳೇ ಆಗದಂತೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಮಕ್ಕಳು ಆಗುತ್ತಿಲ್ಲ ಎನ್ನುವುದಾದರೆ ದಂಪತಿ ಒಟ್ಟಾಗಿ ವೈದ್ಯರ ಬಳಿ ಬಂದು ಆಪ್ತ ಸಮಾಲೋಚನೆ ಮಾಡಿಕೊಳ್ಳಬೇಕು. ವೈದ್ಯರ ಬಳಿ ನಾಚಿಕೆ ಮತ್ತು ಮುಜುಗರ ಬಿಟ್ಟು ಸಮಸ್ಯೆ ಹೇಳಿಕೊಳ್ಳಬೇಕು. ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಂತರದಲ್ಲಿ ಯಾರಿಗೆ ಸಮಸ್ಯೆ ಇದೆಯೋ ಅವರು ಚಿಕಿತ್ಸೆ ಪಡೆದರೆ ಒಂದು ತಿಂಗಳಿನಿಂದ ಒಂದು ವರ್ಷದೊಳಗೆ ಮಕ್ಕಳಾಗುವ ಸಾಧ್ಯತೆ ಇರುತ್ತದೆ ಎಂದು ಸಲಹೆ ನೀಡಿದರು.

ಡಾ.ಸ್ಮೃತಿ ಡಿ. ನಾಯಕ್‌ ಮಾತನಾಡಿ, ಮಹಿಳೆ ಮತ್ತು ಪುರುಷರಲ್ಲಿ ಮಕ್ಕಳಾಗಲು ಒಂದು ನಿರ್ದಿಷ್ಟ ವಯಸ್ಸು ಇರುತ್ತದೆ. ಅದರ ಒಳಗಾಗಿ ಮಕ್ಕಳನ್ನು ಪಡೆಯಬೇಕು. ಮೊದಲು ಮಕ್ಕಳು ಬೇಡವೆಂದು ನಂತರದಲ್ಲಿ ಬೇಕೆಂದರೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಿರುತ್ತದೆ ಎಂದು ಹೇಳಿದರು.

ತಪಾಸಣಾ ಶಿಬಿರಕ್ಕೆ 52 ದಂಪತಿ ಬಂದಿದ್ದರು. 15 ಮಂದಿ ದೂರವಾಣಿ ಕರೆ ಮಾಡಿ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆದುಕೊಂಡರು. 15 ಮಹಿಳೆಯರಿಗೆ ಸ್ಕ್ಯಾನಿಂಗ್‌, 35 ಪುರುಷರಿಗೆ ವೀರ‍್ಯಾಣು ಪರೀಕ್ಷೆ ಮಾಡಲಾಯಿತು.

ಡಾ.ಸಲೀಂ, ರೋಟರಿ ಟ್ರಸ್ಟ್‌ ಅಧ್ಯಕ್ಷ ಎಂ.ಡಿ. ವಿಜಯದೇವು, ರೋಟರಿ ಕ್ಲಬ್ ಅಧ್ಯಕ್ಷ ಆನಮಾನಹಳ್ಳಿ ನಟೇಶ್‌ ಮಾತನಾಡಿದರು. ರೋಟರಿ ಟ್ರಸ್ಟ್‌ ಖಜಾಂಚಿ ಭಾನುಪ್ರಕಾಶ್‌, ರೋಟರಿ ಕ್ಲಬ್‌ ಅಧ್ಯಕ್ಷ ಸಂತೋಷ್‌, ಸಿದ್ದರಾಜು, ಡಿ. ಮುನಿರಾಜು, ನಿರ್ದೇಶಕರಾದ ಸುನಿಲ್‌ ದೇಸಾಯಿ, ಜೈಶಂಕರ್‌, ಸುರೇಂದ್ರ, ಶ್ರೀಧರ್‌, ಚಂದ್ರಪ್ರಭಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.