ADVERTISEMENT

ಮಾಗಡಿ| ಪುರಸಭೆ ಸ್ವತ್ತು ರಕ್ಷಿಸಲು ಒತ್ತಾಯ: ರಂಗಹನುಮಯ್ಯ

ಮಳಿಗೆಗಳ ಹರಾಜು ಮೂಲಕ ಬಾಡಿಗೆ ನಿಗದಿಗೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:54 IST
Last Updated 24 ಜನವರಿ 2020, 14:54 IST
ಮಾಗಡಿ ಪುರಸಭೆ ಆಯವ್ಯಯದ ಬಗ್ಗೆ ನಡದ ಪೂರ್ವಸಿದ್ಧತಾ ಸಭೆಯಲ್ಲಿ ಮುಖ್ಯಾಧಿಕಾರಿ ಮಹೇಶ್‌ ಮಾತನಾಡಿದರು. ವ್ಯವಸ್ಥಾಪಕ ರವಿಕುಮಾರ್‌ ಇದ್ದರು.
ಮಾಗಡಿ ಪುರಸಭೆ ಆಯವ್ಯಯದ ಬಗ್ಗೆ ನಡದ ಪೂರ್ವಸಿದ್ಧತಾ ಸಭೆಯಲ್ಲಿ ಮುಖ್ಯಾಧಿಕಾರಿ ಮಹೇಶ್‌ ಮಾತನಾಡಿದರು. ವ್ಯವಸ್ಥಾಪಕ ರವಿಕುಮಾರ್‌ ಇದ್ದರು.   

ಮಾಗಡಿ: ಅಂಗಡಿ ಮಳಿಗೆಗಳ ಬಾಡಿಗೆ ಹೆಚ್ಚಿಸಲು ಕೂಡಲೇ ಹರಾಜು ಹಾಕಿ, ಆದಾಯ ಹೆಚ್ಚಿಸಿಕೊಳ್ಳಲು ಪುರಸಭೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪುರಸಭೆ ಹಿರಿಯ ಸದಸ್ಯ ರಂಗಹನುಮಯ್ಯ ತಿಳಿಸಿದರು.

ಪುರಸಭೆಯಲ್ಲಿ ಶುಕ್ರವಾರ ನಡೆದ ಆಯವ್ಯಯ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಬಹುಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಬೇಕಾಗಿದ್ದ ಒಳಚರಂಡಿ ಮತ್ತು 24X7 ಕುಡಿಯುವ ನೀರಿನ ಯೋಜನೆಗಳು ವಿಫಲವಾಗಿವೆ. ನಮ್ಮ ಪುರಸಭೆಗೆ ಹೆಚ್ಚಿನ ಆದಾಯ ತರುವ ಮಾರ್ಗಗಳಿವೆ. ಆದರೆ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದ್ದೇವೆ. ಸೋರಿಕೆ ತಡೆಗಟ್ಟಿ, ಆದಾಯ ಸಂಗ್ರಹಿಸಬೇಕು. ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಲೇಹೌಟ್‌ ಮೇಲೆ ಶುಲ್ಕ ವಿಧಿಸಬೇಕು. ಪುರಸಭೆ ಅಭಿವೃದ್ಧಿಗೆ ಅಧಿಕ ಆದಾಯ ತರುವ ರೂಪಿಸಿಕೊಂಡು, ಪುರಸಭೆ ಸ್ವತ್ತುಗಳನ್ನು ರಕ್ಷಿಸಲು ಮುಂದಾಗಬೇಕು’ ಎಂದರು.

ADVERTISEMENT

ಹಿರಿಯ ನಾಗರಿಕ ಎಂ.ಎಚ್.ರಂಗನಾಥ್‌ ಮಾತನಾಡಿ, ಅಧಿಕ ತೆರಿಗೆ ತರುವ ಆಸ್ತಿ ಇದೆ. ಅಧಿಕಾರಿಗಳು ಮತ್ತು ಸದಸ್ಯರು ಸಹಕಾರದಿಂದ ಪಟ್ಟಣದ ಅಭಿವೃದ್ದಿಗೆ ಯೋಜನೆ ತಯಾರಿಸಬೇಕು. ನೀರು ಪೋಲಾಗುವುದನ್ನು ತಡೆಗಟ್ಟಿ. ಕೆರೆಗಳ ಬಳಿ ಧೋಬಿ ಘಾಟ್ ನಿರ್ಮಿಸಬೇಕು. ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಪುರಸಭೆ ಜಾಗ ಅಕ್ರಮವಾಗಿ ಒತ್ತುವರಿಯಾಗಿದೆ. ತೆರವುಗೊಳಿಸಿ, ಪುರಸಭೆ ವಾಣಿಜ್ಯಮಳಿಗೆಗಳಿಗೆ ವರ್ಷಕೊಮ್ಮೆ ಬಾಡಿಗೆ ಹೆಚ್ಚಿಸಿ ಎಂದು ಕೋರಿದರು.

ಪುರಸಭೆ ಸದಸ್ಯ ಎಂ.ಎನ್.ಮಂಜುನಾಥ ಮಾತನಾಡಿ, ಅಧಿಕಾರಿಗಳು ಆದಾಯ ಕ್ರೋಡೀಕರಣದಲ್ಲಿ ಹಿಂದೇಟು ಹಾಕುವುದು ಸರಿಯಲ್ಲ. ಟ್ರೇಡ್ ಲೈಸನ್ಸ್ ಜಾರಿಗೊಳಿಸಿ. ತೆರಿಗೆ ಸಂಗ್ರಹಿಸಲು ಅಧಿಕಾರಿಗಳನ್ನು ನಿತ್ಯ ಮನೆಗಳು ಮತ್ತು ಅಂಗಡಿಗಳ ಬಳಿ ಕಳಿಸಬೇಕು ಎಂದರು.

ಹಿರಿಯ ನಾಗರಿಕ ಹೊಸಪೇಟೆ ನರಸಿಂಹಯ್ಯ ಮಾತನಾಡಿ ಪುರಸಭೆಗೆ ಸೇರಿರುವ ಸರ್ವೆನಂಬರ್ 69ರಲ್ಲಿನ ಐದೂವರೆಗುಂಟೆ, ಅರವಟಿಗೆ ಸ್ವತ್ತು ಇದೆ. ₹70 ಲಕ್ಷ ಬಾಳುವ ಸ್ವತ್ತನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಮೊದಲು ತೆರವುಗೊಳಿಸಿ, ಪುರಸಭೆ ಸ್ವತ್ತನ್ನು ರಕ್ಷಿಸಲು ಮುಂದಾಗಬೇಕು ಎಂದರು.

ಸದಸ್ಯೆ ರೇಖಾ ಮಾತನಾಡಿ ಪಟ್ಟಣದಲ್ಲಿ ಸ್ವಚ್ಛತೆಯಿಲ್ಲದೆ ಇನ್ನಿಲ್ಲದ ರೋಗಗಳು ಹರಡುವ ಭೀತಿ ಇದೆ. ಕಡ್ಡಾಯವಾಗಿ ಜಿ.ಎಸ್.ಟಿ ವಸೂಲಿ ಮಾಡಿ, ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಿಸಿ. ಸರ್ಕಾರಿ ಆಸ್ಪತ್ರೆಯಲ್ಲಿ ನೈರ್ಮಲ್ಯವಿಲ್ಲ. ತೆರೆದ ಚರಂಡಿಗಳ ಮೇಲೆ ಸ್ಲಾಬ್ ಹಾಕಿಸಲು ಹಣವಿಲ್ಲವಂತೆ, ಮತನೀಡಿದವರ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ ಎಂದರು.

ಹೊಂಬಾಳಮ್ಮನಪೇಟೆ ಶಿವಶಂಕರ್ ಮಾತನಾಡಿ, ಪಟ್ಟಣದಲ್ಲಿ ಬಡವರಿಗೆ ಆಶ್ರಯ ಯೋಜನೆಯಡಿ 650 ನಿವೇಶನ ನೀಡುವುದಾಗಿ 6 ವರ್ಷಗಳ ಹಿಂದೆ ಅರ್ಜಿ ಸ್ವೀಕರಿಸಲಾಗಿತ್ತು. ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೆವು. ಆಯ್ಕೆಯಾದವರ ಪಟ್ಟಿಯನ್ನು ಅವರ ಮನೆಗೆ ತಲುಪಿಸಿದ್ದೆವು. ಹಕ್ಕುಪತ್ರ ನೀಡಿ ಬಡವರಿಗೆ ನಿವೇಶನ ವಿತರಿಸಿ ಎಂದರು

ಹಿರಿಯ ನಾಗರಿಕ ಎಂ.ಜಿ.ಜಯಾನಂದಸ್ವಾಮಿ, ಸದಸ್ಯರಾದ ನಾಗರತ್ನಮ್ಮರಾಜಣ್ಣ, ವೆಂಕಟರಾಮ್, ಅಶ್ವತ್ಥ, ಭಾಗ್ಯಮ್ಮನಾರಾಯಣಪ್ಪ, ಹೇಮಲತಾ, ಕಾಂತರಾಜು, ಶಿವಕುಮಾರ್, ಕೆ.ವಿ.ಬಾಲು, ಜಯರಾಮು, ರಹಮತ್‌ ಮಾತನಾಡಿ ತೆರಿಗೆ ಸಂಗ್ರಹದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಮುಖ್ಯಾಧಿಕಾರಿ ಮಹೇಶ್ ಮಾತನಾಡಿ, ಐಡಿಎಸ್ಎಂಟಿ ನಿವೇಶನಗಳಿಗೆ ಸಂಬಂಧಿಸಿದ ಪ್ರಕರಣ ಲೋಕಾಯುಕ್ತದಲ್ಲಿದೆ. ಇನ್ನು ಮುಂದೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯ ತನಕ ಸಿಬ್ಬಂದಿ ಮನೆಮನೆಗೆ ತೆರಳಿ ಕಂದಾಯ ವಸೂಲಿ ಮಾಡಲಿದ್ದಾರೆ, ಟ್ರೇಡ್ ಲೈಸನ್ಸ್ ಮಾಡಿಸುವ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತೇವೆ. ವಿ.ಜಿ.ದೊಡ್ಡಿಯಿಂದ ಹೊಸಪೇಟೆ ಪಂಪ್‌ ಹೌಸ್‌ ವರೆಗೆ ₹30 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ನೂತನ ಲೈನ್ ಅಳವಡಿಸುವ ಕಾಮಗಾರಿ ನಡೆದಿದೆ. ನೀರು ಪೋಲಾಗಂತೆ ಹೆಚ್ಚರವಹಿಸುತ್ತೇವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೆಲ್ಲರ ಸಹಕಾರದಿಂದ ಪುರಸಭೆ ವ್ಯಾಪ್ತಿಯ ನಾಗರೀಕರಿಗೆ ಗುಣಮಟ್ಟದ ಸವಲತ್ತು ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು.

ಪುರಸಭೆ ಮ್ಯಾನೇಜರ್ ರವಿಕುಮಾರ್, ಲೆಕ್ಕಾಧಿಕಾರಿ ನಾಗೇಂದ್ರ, ಕಂದಾಯ ಅಧಿಕಾರಿ ಮಂಜುನಾಥ, ಶಿವಕುಮಾರ್, ಪರಿಸರ ಎಂಜಿನಿಯರ್‌ ಸುಷ್ಮಾ ಹಾಗೂ ಸಾರ್ವಜನಿಕರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.