ADVERTISEMENT

ರೆಸಾರ್ಟ್‌ಗಳಲ್ಲಿ ನಾಯಕರು: ನಾಚಿಕೆಗೇಡಿನ ಸಂಗತಿ– ವಾಟಾಳ್‌

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 13:47 IST
Last Updated 10 ಮೇ 2019, 13:47 IST
ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಖಾಲಿ ಕೊಡಗಳೊಂದಿಗೆ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು
ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಖಾಲಿ ಕೊಡಗಳೊಂದಿಗೆ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು   

ರಾಮನಗರ: ರಾಜ್ಯದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಖಾಲಿ ಕೊಡಗಳೊಂದಿಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಗುಂಡೇರಾವದೊಡ್ಡಿಯಲ್ಲಿ ಭೀಕರ ಬರ ಎದುರಾಗಿದೆ. ಕುಡಿಯಲು ನೀರಿಲ್ಲದೆ ಜನರು ಹಳ್ಳ ತೋಡಿ ಒರತೆಯಿಂದ ಬರುವ ನೀರನ್ನು ಹರಸಾಹಸ ಪಟ್ಟು ಮೇಲೆತ್ತುತ್ತಿದ್ದಾರೆ. ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳದೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ತೀವ್ರ ಬರಗಾಲ ಆವರಿಸಿದೆ. ಪ್ರತಿ ಹಳ್ಳಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬರಗಾಲದ ಸಮಗ್ರ ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ಹಾಗೂ ಮೂರು ದಿನಗಳ ಕಾಲ ಶಾಸನ ಸಭೆ ಕರೆಯಬೇಕು ಎಂದು ವಾಟಾಳ್ ಒತ್ತಾಯಿಸಿದರು.

ADVERTISEMENT

ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಒದಗಿಸಬೇಕಿದೆ. ಬರಗಾಲ ನಿಭಾಯಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ತಹಶೀಲ್ದಾರ್ ಗಳ ಸಭೆ ನಡೆಸಿದರೆ ಪ್ರಯೋಜನವಿಲ್ಲ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳು ರಚನೆ ಆಗಬೇಕು ಎಂದು ತಿಳಿಸಿದರು.

‘ನಾನು ಶಾಸಕನಾಗಿದ್ದ ಅವಧಿ(1967)ಯಲ್ಲಿ ಕಲ್ಬುರ್ಗಿಯಲ್ಲಿ ಬರಗಾಲ ಕುರಿತು ಅಧ್ಯಯನ ಪ್ರವಾಸ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ಇಂದಿನ ಪರಿಸ್ಥಿತಿ ನೋಡಿದರೆ ಬರಗಾಲದಿಂದ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯಾವೊಬ್ಬ ರಾಜಕಾರಣಿಯೂ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದಂತೆ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರೆಸಾರ್ಟ್‌ಗಳಲ್ಲಿ ನಾಯಕರು: ನಾಚಿಕೆಗೇಡಿನ ಸಂಗತಿ

ರಾಜ್ಯದಲ್ಲಿ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲ್ ಅವರು ನಡೆಸಿದ ಆಡಳಿತ ನೋಡಿದ್ದೇನೆ. ಆದರೆ, ಈಗ ನಡೆಯುತ್ತಿರುವ ಕೆಟ್ಟ ರಾಜಕಾರಣವನ್ನು ಎಂದೂ ನೋಡಿರಲಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ರೆಸಾರ್ಟ್‌ಗಳಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಟೀಕಿಸಿದರು.

ಮುಖಂಡರಾದ ಎಂ.ಜಗದೀಶ್, ಗಾಯಿತ್ರಿಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.