ADVERTISEMENT

ಉಪ ಚುನಾವಣೆ: ಜೆಡಿಎಸ್ ನಾಯಕರ ನಡೆಗೆ ಅಸಮಾಧಾನ

ಜೆಡಿಎಸ್ ಕಾರ್ಯಕರ್ತರ ಸಭೆ: ಚುನಾವಣೆ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 13:36 IST
Last Updated 9 ಅಕ್ಟೋಬರ್ 2018, 13:36 IST
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಮಾತನಾಡಿದರು
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಮಾತನಾಡಿದರು   

ರಾಮನಗರ: ನಗರದ ಕೂಟಗಲ್‌ ದೇವೇಗೌಡರ ಮನೆಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನಾಯಕರ ನಡೆ ವಿರುದ್ಧ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತವಾಯಿತು.

ಸಭೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ‘ಕುಮಾರಣ್ಣನವರ ಮನೆಗೆ ಹೋದರೆ ಪೊಲೀಸರು ಹೊರಗೆ ಬಿಡುವುದಿಲ್ಲ. ವಿಧಾನಸೌಧ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ. ಮತ್ತೆ ನಾವು ಎಲ್ಲಿ ಅವರನ್ನು ಭೇಟಿ ಮಾಡಬೇಕು’ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

‘ಮುಖ್ಯಮಂತ್ರಿಗಳಾಗಿ ನಾಲ್ಕು ತಿಂಗಳು ಕಳೆದರೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರಕಿಸಿಲ್ಲ. ಇನ್ಫೋಸಿಸ್‌ನಂತಹ ಕಂಪನಿಯ ಮುಖ್ಯಸ್ಥರು ಮುಖ್ಯಮಂತ್ರಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದನ್ನು ಬಳಸಿಕೊಂಡು ಇಲ್ಲಿನವರಿಗೆ ಕೆಲಸ ಕೊಡಿಸುವ ಪ್ರಯತ್ನ ಆಗುತ್ತಿಲ್ಲ. ಬಿಡದಿಯಲ್ಲಿ ಟೊಯೊಟಾ, ಕೋಕಾಕೋಲಾದಂತಹ ದೈತ್ಯ ಕಂಪನಿಗಳು ಇದ್ದು, ಅಲ್ಲಿಯೂ ಸ್ಥಳೀಯರಿಗೇ ಉದ್ಯೋಗ ನೀಡುವಂತೆ ಶಿಫಾರಸು ಮಾಡುತ್ತಿಲ್ಲ’ ಎಂದು ಕೆಲವರು ಬೇಸರ ತೋಡಿಕೊಂಡರು. ಅಧಿಕಾರಿಗಳ ವರ್ತನೆ ಬಗ್ಗೆಯೂ ಕೆಲವರು ದೂರಿದರು. ಅನಿತಾ ಅವರ ವರ್ತನೆಯ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಕೆ ಮುನ್ನ ಕುಮಾರಸ್ವಾಮಿ ಅವರು ಕಾರ್ಯಕರ್ತರ ಸಭೆ ಕರೆದು ಚರ್ಚಿಸಬೇಕು ಎಂದು ಎಂದು ಕೆಲವರು ಒತ್ತಾಯಿಸಿದರು.

ADVERTISEMENT

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಮಾತನಾಡಿ ‘ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರು ಇದೇ 11ರಂದು ಬೆಳಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಬೇಡ. ಏನೇ ಬೇಡಿಕೆಗಳು ಇದ್ದರೂ ಮುಖ್ಯಮಂತ್ರಿಗಳ ಗಮನಕ್ಕೆ ತರೋಣ. ನಾಮಪತ್ರ ಸಲ್ಲಿಕೆ ಸಂದರ್ಭ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಮನವಿ ಮಾಡಿದರು.

ವಿವಿಧ ಘಟಕಗಳ ಪದಾಧಿಕಾರಿಗಳಾದ ಉಮೇಶ್, ಎಚ್‌.ಸಿ. ರಾಜಣ್ಣ, ಪ್ರಾಣೇಶ್‌, ದೊರೆಸ್ವಾಮಿ, ಅಶೋಕ್, ಚಿಕ್ಕಮಾದೇಗೌಡ, ಅಜಯ್‌ ದೇವೇಗೌಡ, ಜಯಕುಮಾರ್, ರಾಜಶೇಖರ್, ಎಚ್‌.ಕೆ. ಲೋಕೇಶ್‌, ಗುರುಮಲ್ಲಯ್ಯ, ರೈಡ್ ನಾಗರಾಜು, ಜಿ.ಟಿ. ಕೃಷ್ಣ, ಕಿರಣ್ ಬಿಳಗುಂಬ ಇದ್ದರು.

ಪತ್ರಿಕಾಗೋಷ್ಠಿಯಲ್ಲಿ ಗದ್ದಲ
ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಘೋಷಣೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿಯೇ ಕಾರ್ಯಕರ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ರಾಮನಗರ ನಿವಾಸಿ ಅಪ್ಪಾಜಿ ಗೌಡ ಎಂಬುವರು ಮಧ್ಯ ಪ್ರವೇಶಿಸಿ ‘ಅನಿತಾ ಆಯ್ಕೆಗೆ ಕಾರ್ಯಕರ್ತರ ಒತ್ತಾಯ ಇದೆ ಎನ್ನುತ್ತೀರಲ್ಲ? ಎಂದಾದರೂ ಸಭೆ ನಡೆಸಿ ನಮ್ಮ ಅಭಿಪ್ರಾಯ ಪಡೆದಿದ್ದೀರಾ? ಅವರೇ ಅಭ್ಯರ್ಥಿ ಎಂದು ಕುಮಾರಣ್ಣ ಹೇಳಿದ್ದಾರ?’ ಎಂದು ಮಾಧ್ಯಮಗಳ ಮುಂದೆಯೇ ಪ್ರಶ್ನಿಸಿದಾಗ ಪಕ್ಷದ ಮುಖಂಡರು ತಬ್ಬಿಬ್ಬಾದರು.

‘ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಏನಿದೆ? ಪಕ್ಷದ ಸಂಘಟನೆಗೆ ಮಾಡಿದ ಕೆಲಸವಾದರೂ ಏನು. ಸ್ಥಳೀಯ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಇಲ್ಲವೇ’ ಎಂದೆಲ್ಲ ವಾಗ್ದಾಳಿ ನಡೆಸಿದರು. ಜೆಡಿಎಸ್ ಮುಖಂಡರು ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

*ಇದೇ 11ರಂದು ಬೆಳಗ್ಗೆ ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ ಪಕ್ಷದ ನಾಯಕರೂ ಒಪ್ಪಿಗೆ ಸೂಚಿಸಿದ್ದಾರೆ
-ರಾಜಶೇಖರ್‌,ಅಧ್ಯಕ್ಷ, ಜೆಡಿಎಸ್‌ ತಾಲ್ಲೂಕು ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.