ಕನಕಪುರ ಗಲಾಟೆ ನಡೆದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು
ಕನಕಪುರ: ಮೂರು ದಿನಗಳ ಹಿಂದೆ ಮೈಸೂರು ರಸ್ತೆಯ ಬಾರ್‌ವೊಂದರಲ್ಲಿ ಮದ್ಯ ಖರೀದಿಸುತ್ತಿದ್ದ ಗೆಳೆಯರಿಬ್ಬರ ಮೇಲೆ ಹಲ್ಲೆ ನಡೆಸಿದ್ದ ನಾಲ್ವರ ವಿರುದ್ಧ ಟೌನ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಕೋಡಿಹಳ್ಳಿ ಗ್ರಾಮದ ಕಿರಣ್ ಕುಮಾರ್ ಮತ್ತು ಸ್ನೇಹಿತ ಮಲ್ಲಿಕಾರ್ಜುನ ಎಂಬುವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕನಕಪುರ ನಗರದ ಚಂದ್ರಮೌಳಿ, ಕಣ್ಣ, ಬೊಮ್ಮ, ಲಿಂಗಪ್ಪ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸ್ನೇಹಿತರಾದ ಮಲ್ಲಿಕಾರ್ಜುನ ಮತ್ತು ಮಧು ಜೊತೆ ಕಿರಣ್ ಕುಮಾರ್ ಜೂನ್ 9 ರಂದು ಮೈಸೂರು ರಸ್ತೆಯ ಬಾರ್‌ವೊಂದರಲ್ಲಿ ಮದ್ಯ ಖರೀದಿಸಲು ತೆರಳಿದಾಗ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದರು.
ಆರೋಪಿಗಳು ಮಲ್ಲಿಕಾರ್ಜುನ ಮೇಲೆ ಹಲ್ಲೆ ನಡೆಸುತ್ತಿದ್ದರು. ಅದನ್ನು ತಡೆಯಲು ಹೋದ ಕಿರಣ್‌ಕುಮಾರ್ ಮೇಲೂ ಹಲ್ಲೆ ನಡೆಸಿದ್ದರು.
ನಾಲ್ವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಿರಣ್ ಕುಮಾರ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಗಲಾಟೆ ಮುಖ್ಯ ಕಾರಣ ಏನು ಎಂಬ ಮಾಹಿತಿಯನ್ನು ದೂರುದಾರರು ದೂರಿನಲ್ಲಿ ತಿಳಿಸಿಲ್ಲ.