ADVERTISEMENT

ಕನಕಪುರ ನಗರಸಭೆ: ನಾಳೆ ಮತದಾನ

ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ; ಪೊಲೀಸರಿಂದ ಭದ್ರತೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
ಇವಿಎಂ ಹಿಡಿದು ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಚುನಾವಣಾ ಸಿಬ್ಬಂದಿ
ಇವಿಎಂ ಹಿಡಿದು ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಚುನಾವಣಾ ಸಿಬ್ಬಂದಿ   

ಕನಕಪುರ: ಇಲ್ಲಿನ ನಗರಸಭೆಯ 24 ವಾರ್ಡುಗಳಿಗೆ ಮಂಗಳವಾರ ಚುನಾವಣೆ ನಡೆಯಲಿದ್ದು, ಮುಂಜಾನೆ 7ರಿಂದ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ.

ವಾರ್ಡುಗಳ ಪುನರ್‌ವಿಂಗಡನೆ ಬಳಿಕ ಒಟ್ಟು 31 ವಾರ್ಡುಗಳನ್ನಾಗಿ ರಚಿಸಲಾಗಿತ್ತು. ಇದರಲ್ಲಿ 7 ವಾರ್ಡುಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ ವಾರ್ಡುಗಳಿಗೆ ಮಾತ್ರ ಮತದಾನ ನಡೆಯುತ್ತಿದೆ.

ಒಟ್ಟು 13 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಅವುಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಪ್ರತಿ ಮತಗಟ್ಟೆಗೂ ತಲಾ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟಾರೆ ಚುನಾವಣೆಗೆ 120 ಸಿಬ್ಬಂದಿ ಜೊತೆಗೆ 70 ಪೊಲೀಸರು ಮತ್ತು 8 ವಾಹನಗಳ ಬಳಕೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್‌ ಎಂ.ಆನಂದಯ್ಯ ತಿಳಿಸಿದರು.

ADVERTISEMENT

ಬೆಳಿಗ್ಗೆ 6 ಗಂಟೆಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಬರುವ ಏಜೆಂಟರ್‌ ಸಮಕ್ಷಮದಲ್ಲಿ ಮಾರ್ಕ್‌ ಪೊಲ್‌ ನಡೆಸಲಾಗುವುದು, ನಂತರ 7 ಗಂಟೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಂಜೆ 5 ಗಂಟೆವರೆಗೆ ಮತದಾನ ಮಾಡಲು ಅವಕಾಶವಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಮಸ್ಟರಿಂಗ್‌ ಕಾರ್ಯ: ಇಲ್ಲಿನ ಎಕ್ಸ್‌ ಮುನ್ಸಿಪಲ್‌ ಶಾಲೆಯಲ್ಲಿ ಸೋಮವಾರ ಮಸ್ಟರಿಂಗ್‌ ಕಾರ್ಯ ನಡೆಯಿತು. ಇವಿಎಂ ಯಂತ್ರಗಳನ್ನು ಹಿಡಿದು ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ಮತಗಟ್ಟೆಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಅಧಿಕಾರಿಗಳು ಕಲ್ಪಿಸಿದ್ದಾರೆ. ಮತಗಟ್ಟೆಯಿಂದ ಸುತ್ತಲೂ 100 ಮೀಟರ್‌ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಇದ್ದು, ಮತದಾರರಲ್ಲದವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

20 ದಾಖಲೆಯಲ್ಲಿ ಒಂದು

ಮತದಾರರು ಎಪಿಕ್‌ ಕಾರ್ಡಿನ ಜೊತೆಗೆ ಇನ್ನಿತರೆ 20 ರೀತಿಯ ಸರ್ಕಾರಿ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದು. ಆಧಾರ್‌ ಕಾರ್ಡ್‌, ವಾಹನ ಚಾಲನ ಪರವಾನಗಿ, ರೇಷನ್‌ ಕಾರ್ಡ್‌ ಸಹಿತ ಅಧಿಕೃತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪ್ರಸ್ತುತಪಡಿಸಿ ಮತ ಚಲಾವಣೆ ಮಾಡಬಹುದಾಗಿದೆ.

ರೇಷ್ಮೆ ಮಾರುಕಟ್ಟೆಗೆ ರಜೆ

ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕನಕಪುರ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಕನಕಪುರದಲ್ಲಿ ಇರುವ ರೇಷ್ಮೆಗೂಡು ಮಾರುಕಟ್ಟೆಗೂ ರಜೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ರೈತರಿಗೆ ತೊಂದರೆ ಆಗುವ ಸಾಧ್ಯತೆ ಇದೆ.

ಮತದಾರರ ವಿವರ
43,603–ಒಟ್ಟು ಮತದಾರರು
21,258–ಪುರುಷ ಮತದಾರರು
22,444–ಮಹಿಳಾ ಮತದಾರರು
1–ತೃತೀಯ ಲಿಂಗಿ ಮತದಾರರು


63–ಕಣದಲ್ಲಿ ಇರುವ ಅಭ್ಯರ್ಥಿಗಳು
24–ಮತದಾನ ನಡೆಯಲಿರುವ ವಾರ್ಡುಗಳ ಸಂಖ್ಯೆ
30–ಮತಗಟ್ಟೆಗಳ ಸಂಖ್ಯೆ
120–ಸಿಬ್ಬಂದಿ ನಿಯೋಜನೆ

***
ಎಲ್ಲ ಮತಗಟ್ಟೆಗೂ ಈಗಾಗಲೇ ಸಿಬ್ಬಂದಿ ತೆರಳಿದ್ದಾರೆ. ಮಂಗಳವಾರ ಬೆಳಿಗ್ಗೆ 7ರಿಂದಲೇ ಮತದಾನಕ್ಕೆ ಚಾಲನೆ ದೊರೆಯಲಿದೆ
–ಎಂ. ಆನಂದಯ್ಯ,ತಹಶೀಲ್ದಾರ್‌, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.