ಕನಕಪುರ: ಕನಕಪುರದ ಗಾಂಧಿ ಎಂದೇ ಖ್ಯಾತಿಯಾಗಿರುವ ಎಸ್.ಕರಿಯಪ್ಪ ಅವರು ತಮಗೆ ಒಲಿದು ಬಂದ ಉನ್ನತ ಹುದ್ದೆ, ಅವಕಾಶಗಳನ್ನು ತಿರಸ್ಕರಿಸಿ ತಾಲ್ಲೂಕಿನ ಜನತೆಗಾಗಿ ವಿದ್ಯಾಸಂಸ್ಥೆ ಕಟ್ಟಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿದ್ದಾರೆ. ಅವರ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇಲ್ಲಿನ ರೂರಲ್ ಕಾಲೇಜ್ ಆವರಣದಲ್ಲಿ ರೂರಲ್ ಎಜುಕೇಶನ್ ಸೊಸೈಟಿ ವತಿಯಿಂದ ಭಾನುವಾರ ನಡೆದ ಆರ್‌ಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಸ್.ಕರಿಯಪ್ಪ ಅವರ 125ನೇ ಜನ್ಮ ದಿನೋತ್ಸವ ಮತ್ತು 45ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುದ್ಧ ಗೆಲ್ಲುವವನು ವೀರನೂ ಅಲ್ಲ, ರಾಜನು ಅಲ್ಲ. ಯಾರು ಜನರ ಮನಸ್ಸು ಗೆಲ್ಲುತ್ತಾರೊ ಅವರೇ ವೀರ, ನಿಜವಾದ ರಾಜ. ಕರಿಯಪ್ಪ ಅವರು ಜನರ ಮನಸ್ಸು ಗೆದ್ದಿದ್ದಾರೆ. ಅವರ ಹೆಸರು ಅಜರಾಮರವಾಗಿದೆ ಎಂದರು.
ಕರಿಯಪ್ಪ ಅವರನ್ನು ನಾವು ಇಂದು ಸ್ಮರಿಸಲು ಅವರು ಮಾಡಿದಂತಹ ಸೇವೆಯೇ ಕಾರಣ. ಅಂದಿನ ಕಾಲಕ್ಕೆ ಅವರು ಪದವೀಧರರಾಗಿದ್ದರು. ಅವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ಸಿಗುತ್ತಿತ್ತು, ಅದನ್ನು ಪಡೆದು ಅನುಭವಿಸಿ ಹೋಗಿದ್ದರೆ ಅವರನ್ನು ಇಂದು ಯಾರು ನೆನಪಿಸಿಕೊಳ್ಳುತ್ತಿರಲಿಲ್ಲ. ಅಂದು ಅವರು ಆ ಉನ್ನತ ಹುದ್ದೆ ತಿರಸ್ಕರಿಸಿ ತಮ್ಮ ಜೀವನವನ್ನು ಶಿಕ್ಷಣ ಸಂಸ್ಥೆಗಾಗಿ ಮುಡುಪಾಗಿಟ್ಟಿದ್ದು ಇಂದು ಅವರನ್ನು ನೆನೆಯಲು ಕಾರಣವಾಗಿದೆ ಎಂದು ತಿಳಿಸಿದರು.
ಕರಿಯಪ್ಪನವರು ಮಾಡಿದಂತಹ ಕೆಲಸಕ್ಕೆ ಸುಬ್ಬುರಾವ್ ಕುಟುಂಬ ಹಾಗೂ ರಂಗೇಗೌಡರ ಕುಟುಂಬದವರು ಬೆಲೆ ಬಾಳುವಂತಹ ಜಾಗವನ್ನು ದಾನವಾಗಿ ನೀಡಿ ಸಹಕಾರ ನೀಡಿದ್ದಾರೆ ಎಂದು ನೆನೆದರು.
ಸಂಸದ ಡಾ.ಸಿ.ಎನ್ ಮಂಜುನಾಥ್ ಮಾತನಾಡಿ, ದೇವರೇ ಬಂದು ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಶುದ್ಧ ವ್ಯಕ್ತಿತ್ವವುಳ್ಳ, ಮಾನವೀಯ ಮೌಲ್ಯವುಳ್ಳ ಕರಿಯಪ್ಪ ಅಂತವರನ್ನು ಈ ಭೂಮಿಗೆ ಕಳಿಸಿಕೊಡುತ್ತಾನೆ. ಅವರ ಮೂಲಕ ಇಂತಹ ಸತ್ಕಾರ್ಯಗಳನ್ನು ಮಾಡಿಸುತ್ತಾನೆ. ಅದೇ ರೀತಿ ಕರಿಯಪ್ಪನವರು ನಿಸ್ವಾರ್ಥದಿಂದ ಈ ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಕರಿಯಪ್ಪನವರು ಗುಡಿಸಲಿನಲ್ಲಿ ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಆಲದ ಮರದಂತೆ ಬೆಳೆದಿದೆ. ಗ್ರಾಮೀಣ ಪ್ರದೇಶದ ಜನರಿಗಾಗಿ ಈ ಸಂಸ್ಥೆಯನ್ನು ಕಟ್ಟಿದ್ದು, ಇದು ವಿಶ್ವವಿದ್ಯಾನಿಲಯವಾಗಿ ಬೆಳೆಯಬೇಕು. ಆಗ ಮಾತ್ರ ಕರಿಯಪ್ಪನವರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಸಂಸ್ಥೆಯಲ್ಲಿ ಹೊಸದಾಗಿ ಅಗ್ರಿಕಲ್ಚರ್ ಕಾಲೇಜನ್ನು ಪ್ರಾರಂಭಿಸಿದ್ದು ಇಂದಿನ ಅವಶ್ಯಕತೆಗೆ ತಕ್ಕಂತೆ ಕೋರ್ಸುಗಳನ್ನು ಪ್ರಾರಂಭಿಸಬೇಕು. ಸಂಸ್ಥೆಯನ್ನು ಬೆಳೆಸಬೇಕು ಆ ನಿಟ್ಟಿನಲ್ಲಿ ಎಂಪಿ ಅನುದಾನದಿಂದ ₹50 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ತಾವು ಕರಿಯಪ್ಪ ಅವರ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು ಅವರ ಒಡನಾಡಿಯಾಗಿದ್ದೆ. ಅವರು ಬದ್ಧತೆಯಿಂದ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಬದ್ಧತೆಯನ್ನು ನಾವು ಬೆಳೆಸಿಕೊಳ್ಳಬೇಕು. ಸಾರ್ವಜನಿಕವಾಗಿ ಸೇವೆ ಮಾಡುತ್ತಿರುವ ಈ ಸಂಸ್ಥೆಗೆ ಉದಾರವಾಗಿ ಸಹಕಾರ ನೀಡಬೇಕು. ಅದಕ್ಕಾಗಿ ಒಂದು ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದರು.
ಆರ್‌ಇಎಸ್ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಕರಿಯಪ್ಪ ಅವರು ಸ್ವತಂತ್ರ ಪೂರ್ವದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಅಂದು ಜನರಿಗೆ ಬೇಕಿರುವ ಅಗತ್ಯ ಶಿಕ್ಷಣವನ್ನು ನೀಡಿದ್ದಾರೆ. ಆದರೆ, ಇಂದು ಬದಲಾದ ಪರಿಸ್ಥಿತಿಯಲ್ಲಿ ಇಂದಿನ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣವನ್ನು ನಾವು ಕೊಡಬೇಕಿದೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕರಿಯಪ್ಪ ಅವರ ಕುರಿತ ಜೀವನಧಾರಿತ ಒಂದು ಗಂಟೆಯ ಸಾಕ್ಷ್ಯ ಚಿತ್ರವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಡುಗಡೆಗೊಳಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪ್ರದರ್ಶನವಾಯಿತು.
ನಗರದಲ್ಲಿ ಕರಿಯಪ್ಪ ಅವರ ಭಾವಚಿತ್ರವನ್ನು ಹೊತ್ತಂತಹ ಬೆಳ್ಳಿರಥ ಮೆರವಣಿಗೆಯು ನಡೆಯಿತು. ಸ್ತಬ್ಧ ಚಿತ್ರಗಳು, ಕಲಾತಂಡಗಳು, ಹಳ್ಳಿಕಾರ್ ಹೋರಿಗಳು ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಕರಿಯಪ್ಪನವರ ಸಮಾಧಿಗೆ ಮತ್ತು ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಕರಿಯಪ್ಪ ಅವರ ಹೆಸರಿನಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಲಾಯಿತು.
ಕರಿಯಪ್ಪ ಅವರು ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಅಂದು 23 ಎಕರೆ ಜಾಗವನ್ನು ದಾನವಾಗಿ ನೀಡಿದ್ದ ಸುಬ್ಬುರಾವ್ ಮತ್ತು ರಂಗೇಗೌಡರ ಕುಟುಂಬದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ತು ಸದಸ್ಯರಾದ ಎಸ್.ರವಿ, ಸುಧಾಮ ದಾಸ್ ಸೇರಿದಂತೆ ಆರ್‌ಇಎಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಕರಿಯಪ್ಪ ಅವರ ಅಭಿಮಾನಿಗಳು, ಅನುಯಾಯಿಗಳು, ಶಿಕ್ಷಣ ಸಂಸ್ಥೆ ಪ್ರಾಂಶುಪಾಲರು, ಪ್ರಾಧ್ಯಾಪಕರು, ಮುಖ್ಯಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.