
ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ವ್ಯಾಪ್ತಿಯ ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳ ಆನೆ ಮರಿಯೊಂದು ಸಾವನ್ನಪ್ಪಿದೆ.
ಆನೆಗಳ ಹಿಂಡೊಂದು ನಾಲ್ಕೈದು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಗೀಳಿಡುತ್ತಿತ್ತು. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಆನೆ ಮರಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬನ್ನೇರುಘಟ್ಟ ಉದ್ಯಾನದ ಪಶು ವೈದ್ಯ ವಿನಯ್, ಮೃತ ಆನೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರಣ್ಯದಲ್ಲಿಯೇ ಕಳೇಬರಹದ ಅಂತ್ಯಸಂಸ್ಕಾರ ನಡೆಸಲಾಯಿತು. ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ರವಿಕುಮಾರ್, ಪಶುವೈದ್ಯ ಶ್ರೀನಾಥ್, ಡಿಆರ್‌ಎಫ್‌ಒಗಳಾದ ನಾಗರಾಜು, ಚೇನತ್ ಇದ್ದರು.
‘ಆನೆ ಮರಿಯ ಸಾವಿನ ಬಗ್ಗೆ ಅನುಮಾನವಿದ್ದು ಯಾವ ಕಾರಣದಿಂದ ಸಾವನ್ನಪ್ಪಿದೆ ಎಂಬುದು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ಫಲಿತಾಂಶ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಬೇಕಿದೆ’ ಎಂದು ಅರಣ್ಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.