ADVERTISEMENT

ಕನ್ನಡ ಮೊದಲ ಆದ್ಯತೆಯಾಗಲಿ

ಭಾಷೆಯ ಬಗ್ಗೆ ನಿರ್ಲಕ್ಷಬೇಡ: ಮುಮ್ಮಡಿ ಶಿವರುದ್ರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 15:56 IST
Last Updated 23 ನವೆಂಬರ್ 2019, 15:56 IST
ಕನಕಪುರ ಕೆಪಿಸಿಎಂಎಸ್‌ ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಮ್ಮಡಿ ಶಿವರುದ್ರಸ್ವಾಮಿಗಳು ಮಾತನಾಡಿದರು
ಕನಕಪುರ ಕೆಪಿಸಿಎಂಎಸ್‌ ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಮ್ಮಡಿ ಶಿವರುದ್ರಸ್ವಾಮಿಗಳು ಮಾತನಾಡಿದರು   

ಕನಕಪುರ: ಕನ್ನಡ ಭಾಷೆಗೆ ಬಂಧಿರುವ 8 ಜ್ಙಾನ ಪೀಠ ಪ್ರಶಸ್ತಿಗಳನ್ನು ನಮ್ಮ ಸಾಹಿತಿಗಳು, ವಿದ್ವಾಂಸರು ಅಚ್ಚ ಕನ್ನಡ ಭಾಷೆಯಲ್ಲೇ ಸಾಧನೆ ಮಾಡಿರುವುದು ಎಂಬುದನ್ನು ಯಾರೂ ಮರೆಯಬಾರದು. ಕನ್ನಡ ಭಾಷೆಯೆಂದರೆ ನಿರ್ಲಕ್ಷ್ಯ ಬೇಡವೆಂದು ಮರಳೇ ಗವಿಮಠದ ಮುಮ್ಮಡಿ ಶಿವರುದ್ರಸ್ವಾಮಿ ಹೇಳಿದರು.

ಇಲ್ಲಿನ ಮೈಸೂರು ರಸ್ತೆಯ ನಾರಾಯಣಪ್ಪನ ಕೆರೆ ಮುಂಭಾಗದಲ್ಲಿರುವ ಕೆಪಿಎಸ್‌ಎಂಎಸ್‌ ಕಾಲೇಜಿನಲ್ಲಿ ಶನಿವಾರ ನಡೆದ ಕೆ.ಪಿ. ಶ್ರೀ ಕಂಠಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ, ಪದವಿ ಪೂರ್ವ ಅಂತರ ಕಾಲೇಜು ಚರ್ಚಾ ಸ್ಪರ್ಧೆ, 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ' ದಲ್ಲಿ ಮಾತನಾಡಿದರು.

ನಿರ್ಲಕ್ಷ್ಯ ಧೋರಣೆಯಿಂದ, ಬೇರೆ ಭಾಷೆಗಳ ವ್ಯಮೋಹದಿಂದ ಕನ್ನಡ ಭಾಷೆಗೆ ಕುತ್ತು ಬಂದಿದೆ ವಿನಾ ಭಾಷೆಯು ಶ್ರೀಮಂತವಾಗಿದೆ. ಇಂದಿಗೂ ಸಮೃದ್ಧವಾಗಿದೆ. ಮೊದಲು ಕನ್ನಡವನ್ನು ಪ್ರೀತಿಸಿ ಗೌರವಿಸಬೇಕು. ಅನಂತರ ಬೇರೆ ಭಾಷೆಯನ್ನು ಗೌರವಿಸಿ ಎಂದು ಕಿವಿಮಾತು ಹೇಳಿದರು.

ADVERTISEMENT

ಬಸವ ಪಟ್ಟಣದ ಬಸವಲಿಂಗ ಶಿವಚಾರ್ಯಸ್ವಾಮಿ ಮಾತನಾಡಿ, ‘ಕನ್ನಡ ಎಂದು ಬಡಿದಾಡುವ ನಾವು ನವೆಂಬರ್‌ ತಿಂಗಳ ಕನ್ನಡಿಗರಾಗುತ್ತಿರುವುದು ದುರ್ದೈವ. 365 ದಿನವೂ ಕನ್ನಡವನ್ನು ಪ್ರೀತಿಸಬೇಕು, ಕನ್ನಡವನ್ನು ನಮ್ಮ ಉಸಿರಾಗಿಸಬೇಕು. ನಮ್ಮ ಮಕ್ಕಳಿಗೆ ನಮ್ಮ ನಾಡಿನ ಸಾಹಿತಿಗಳು, ಕವಿಗಳು, ವಿದ್ವಾಂಸರ ಬಗ್ಗೆ ತಿಳಿಸಿಕೊಡಬೇಕು’ ಎಂದರು.

ನಮ್ಮ ಹಾದಿಯಾಗಿ ನಮ್ಮ ಮಕ್ಕಳಿಗೆ ಹಚ್ಚ ಕನ್ನಡದ ಸ್ವಚ್ಛ ಮನಸ್ಸಿನಿಂದ ಮಾತನಾಡುವ ಕನ್ನಡಿಗರನ್ನಾಗಿ ಮಾಡಬೇಕೆಂದು ಹೇಳಿದರು.

ಚಿಕ್ಕಕಲ್ಬಾಳ್‌ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಿದರು. ಕೆಪಿಎಸ್‌ಎಂಎಂಇಟಿ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಕೆ.ಎಸ್‌. ಮಂಜುನಾಥ್‌ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಆಚರಣೆ, ಕನ್ನಡ ಸಂಬಂಧ ಚರ್ಚಾಸ್ಪರ್ಧೆ ಮೊದಲಾದ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಇಂದು ಸ್ಪಂದನೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 83 ಪಿಯು ಕಾಲೇಜುಗಳಿವೆ. ಆದರೆ ಅಂತರ ಕಾಲೇಜು ಚರ್ಚಾಸ್ಪರ್ಧೆಗೆ ಕೇವಲ 3 ಕಾಲೇಜುಗಳಿಂದ ಮಾತ್ರ ಬಂದಿದ್ದಾರೆ. ಕೆಲವು ಕಾಲೇಜುಗಳಲ್ಲಿ ನಮಗೆ ದೈನಂದಿನ ಭತ್ಯೆ ಕೊಟ್ಟರೆ ಮಾತ್ರ ಬರುತ್ತೇವೆ ಎಂದು ಹೇಳುತ್ತಾರೆ ಎಂತಹ ದುರ್ದೈವ. ಉತ್ತಮ ವ್ಯಕ್ತಿಗಳನ್ನು ನಿಜವಾದ ಸಾಧಕರನ್ನು ಸಮಾಜವಾಗಲಿ, ಸರ್ಕಾರವಾಗಲಿ ಇಂದಿಗೂ ಗುರುತಿಸಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಧಕರಿಗೆ ಗೌರವ: ಗ್ರಾಹಕರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈ.ಜಿ.ಮುರಳೀಧರನ್‌, ಸಾಹಿತ್ಯ ಹಾಗೂ ಪರಿಸರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಶಿವನಂಜಯ್ಯ, ಸಾವಯವ ಕೃಷಿ ಹಾಗೂ ಜನಪದ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ಎಂ.ನಾಗರಾಜು, ಕುಸ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಶೋಕ್‌ ಅವರುಗಳಿಗೆ 'ಕೆ.ಪಿ.ಶ್ರೀಕಂಠಯ್ಯ ಸ್ಮಾರಕ ಕನ್ನಡ ರಾಜ್ಯೋತ್ಸವ 2019 ಪ್ರಶಸ್ತಿ' ಯನ್ನು ನೀಡಿ ಗೌರವಿಸಲಾಯಿತು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಆರ್‌.ಪ್ರಕಾಶ್‌, ಕಸಾಪ ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ಆರ್‌.ವಿ.ನಾರಾಯಣ, ಕಸಾಪ ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಜಾಕೀರ್‌ ಹುಸೇನ್‌, ಭಾನುಪ್ರಕಾಶ್‌, ವೀರೇಶ್‌ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.