ಮಾಗಡಿ: ಪಟ್ಟಣದಲ್ಲಿ ಶೀಘ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆರಂಭಿಸಿ ಒಂದರಿಂದ ದ್ವಿತೀಯ ಪಿಯುವರೆಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಭರವಸೆ ನೀಡಿದರು.
ತಾಲ್ಲೂಕಿನ ನೇತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಂಗಿ ಚಿಕ್ಕನಪಾಳ್ಯ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಈಗ ಪಟ್ಟಣದಲ್ಲಿ ಕೆಪಿಎಸ್ ಆರಂಭಿಸಲಾಗುತ್ತದೆ. ಕುದೂರು ಭಾಗದಲ್ಲಿ ಕೆಪಿಎಸ್ ನಡೆಯುತ್ತಿದ್ದು, ಸಂಕೀಘಟ್ಟ, ಜಾಲಮಂಗಲ ಹಾಗೂ ಬಿಡಿದಿಯಲ್ಲಿ ಶಾಲೆ ಮಾಡುವಂತೆ ಮನವಿ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳು ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನೆಲೆ ಮುಚ್ಚಲಾಗಿದೆಯೇ ಹೊರತು ಮೂಲಸೌಲಭ್ಯಗಳ ಕೊರತೆಯಿಂದಲ್ಲ ಎಂದರು.
ಸರ್ಕಾರಿ ಶಾಲಾ ಕಟ್ಟಡ ಕಟ್ಟುವ ಸಮಯದಲ್ಲಿ ಆ ಭಾಗದ ಗ್ರಾಮ ಪಂಚಾಯಿತಿ ಸದಸ್ಯರು ಶಿಕ್ಷಕರು ಸರಿಯಾಗಿ ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಳ್ಳಬೇಕು. ಒಂದು ಕಟ್ಟಡ ನಿರ್ಮಿಸಿದರೆ ಕನಿಷ್ಠ 30 ರಿಂದ 40 ವರ್ಷ ಬರಬೇಕು. ವರ್ಷ ಕಳೆಯುವುದರಲ್ಲಿ ಶಿಥಿಲಗೊಂಡರೆ ಇದರ ಹೊಣೆ ಮುಖ್ಯ ಶಿಕ್ಷಕರು ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜೊತೆ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶರತ್ ಕುಮಾರ್, ತಾ.ಪಂ. ಇಒ ಜೈಪಾಲ್, ಬಿಇಒ ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಚೈತ್ರ, ಸಿಡಿಪಿಓ ಸುರೇಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಸೀತಾರಾಮ್, ಗ್ರಾ.ಪಂ.ಮಾಜಿ ಸದಸ್ಯ ಶಾಂತರಾಜು, ಗುತ್ತಿಗೆದಾರ ಚಿಕ್ಕಣ್ಣ, ಕಲಾವಿದ ಶ್ರೀನಿವಾಸ್, ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ನೇತೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.