ADVERTISEMENT

ವರ್ಷದಲ್ಲಿ ಕೆಂಪಾಪುರ ಸಮಗ್ರ ಅಭಿವೃದ್ಧಿ

ಕೆಂಪೇಗೌಡರ 512ನೇ ಜಯಂತ್ಯುತ್ಸವದಲ್ಲಿ ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 19:47 IST
Last Updated 27 ಜೂನ್ 2021, 19:47 IST
ಮಾಗಡಿ ಕೆಂಪೇಗೌಡರ 512ನೇ ಜಯಂತ್ಯುತ್ಸವದ ಅಂಗವಾಗಿ ಕೆಂಪಾಪುರದಲ್ಲಿನ ವೀರಸಮಾಧಿಗೆ ಡಿಸಿಎಂ.ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಶಾಸಕ ಎ.ಮಂಜುನಾಥ್‌, ಕೆಂಪೇಗೌಡ ಪ್ರಾಧಿಕಾರದ ಸದಸ್ಯ ಎಚ್‌.ಎಂ.ಕೃಷ್ಣಮೂರ್ತಿ, ಬಿ.ಬಿ.ಎಂ.ಪಿ.ಮಾಜಿ ಸದಸ್ಯ ಎ.ಎಚ್‌.ಬಸವರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಇದ್ದರು
ಮಾಗಡಿ ಕೆಂಪೇಗೌಡರ 512ನೇ ಜಯಂತ್ಯುತ್ಸವದ ಅಂಗವಾಗಿ ಕೆಂಪಾಪುರದಲ್ಲಿನ ವೀರಸಮಾಧಿಗೆ ಡಿಸಿಎಂ.ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಶಾಸಕ ಎ.ಮಂಜುನಾಥ್‌, ಕೆಂಪೇಗೌಡ ಪ್ರಾಧಿಕಾರದ ಸದಸ್ಯ ಎಚ್‌.ಎಂ.ಕೃಷ್ಣಮೂರ್ತಿ, ಬಿ.ಬಿ.ಎಂ.ಪಿ.ಮಾಜಿ ಸದಸ್ಯ ಎ.ಎಚ್‌.ಬಸವರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಇದ್ದರು   

ಮಾಗಡಿ: ನಾಡಪ್ರಭು ಕೆಂಪೇಗೌಡರ ವೀರ ಸಮಾಧಿ ಇರುವ ಕೆಂಪಾಪುರ ಗ್ರಾಮವನ್ನು ಒಂದು ವರ್ಷದೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಿ ಮುಂದಿನ ವರ್ಷದ ಜಯಂತಿಯನ್ನು ಇಲ್ಲಿಯೇ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಕೆಂಪೇಗೌಡರ 512ನೇ ಜಯಂತ್ಯುತ್ಸವ ನಿಮಿತ್ತ ಕೆಂಪಾಪುರ ಗ್ರಾಮದಲ್ಲಿರುವ ಕೆಂಪೇಗೌಡರ ವೀರಸಮಾಧಿಗೆ ಭಾನುವಾರ ಬೆಳಿಗ್ಗೆ ಪೂಜೆ ಸಲ್ಲಿಸಿ, ಕೆಂಪೇಗೌಡರ ಆತ್ಮಜ್ಯೋತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ. ಹೀಗಾಗಿ ಸಮಾಧಿ ಸ್ಥಳ ಮತ್ತು ಕೆಂಪಾಪುರದ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು. ನಾಡಿನ ಮತ್ತು ದೇಶದ ಸಮಸ್ತ ಜನರು ಇಲ್ಲಿಗೆ ಭೇಟಿ ನೀಡುವಂತೆ ಆಗಬೇಕು. ಕೆಂಪೇಗೌಡರ ಕಾಲದ ಆಡಳಿತ ವೈಭವವನ್ನು ಮರುಸೃಷ್ಟಿ ಮಾಡಿ ಇಡೀ ಗ್ರಾಮವನ್ನು ಐತಿಹಾಸಿಕವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ADVERTISEMENT

ಈಗಾಗಲೇ ಯೋಜನೆ ಜಾರಿ ಹಂತದಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯನ್ನು ಕ್ಷಿಪ್ರವಾಗಿ ಮುಗಿಸಲಾಗುವುದು. ಅದಕ್ಕಾಗಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಪರಿಹಾರ: ಕೆಂಪಾಪುರದಲ್ಲಿ ಸಮಾಧಿ ಅಭಿವೃದ್ಧಿ ಕಾಮಗಾರಿಯಿಂದಾಗಿ ಭೂಮಿ ಕಳೆದುಕೊಳ್ಳಲಿರುವ ರೈತಾಪಿವರ್ಗದವರಿಗೆ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು.

ಪಟ್ಟಣದಲ್ಲಿ 19 ವರ್ಷಗಳ ಹಿಂದೆ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಪ್ರತಿಷ್ಠಾಪಿಸಿರುವ ಕೆಂಪೇಗೌಡರ ಪುತ್ಥಳಿಯನ್ನು ಅಧಿಕೃತವಾಗಿ ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳುವುದಾಗಿ ಡಿಸಿಎಂ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಶಾಸಕ ಎ.ಮಂಜುನಾಥ್, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ಎಂ.ಕೃಷ್ಣಮೂರ್ತಿ, ಬಿಬಿಎಂಪಿ ಮಾಜಿ ಸದಸ್ಯ ಎ.ಎಚ್.ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಡಿವೈಎಸ್‌ಪಿ ಓಂ ಪ್ರಕಾಶ್‌ ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್, ಸರ್ಕಲ್‌ ಇನ್‌ ಸ್ಪೆಕ್ಟರ್‌ಗಳಾದ ಬಿ.ರವಿ ಬೆಳವಂಗಲ, ಕುಮಾರ್‌, ಕುದೂರು ಪಿಎಸ್‌ಐ ಪುಟ್ಟೇಗೌಡ, ಮಾಗಡಿ ಪಿಎಸ್‌ಐ ಶ್ರೀಕಾಂತ್‌, ಸುವರ್ಣ ಕನ್ನಡನಾಡು ಯುವವೇದಿಕೆ ಸಂಸ್ಥಾಪಕ ಅಧ್ಯಕ್ಷ ಆರ್.ರಂಗೇಶ್ ಗೌಡ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೊಡ್ಡಿರಾಜೇಶ್, ಚಿಕ್ಕಮುದುಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಸದಸ್ಯೆ ಪ್ರಮೀಳಾ ರಾಜಣ್ಣ, ಚಿಕ್ಕಕಲ್ಯದ ಶ್ರೀಧರ್, ಸಂಕೀಘಟ್ಟ ಗ್ರಾ.ಪಂ.ಅಧ್ಯಕ್ಷ ಸೂರ್ಯಕುಮಾರ್, ಹುಚ್ಚಹನುಮೇಗೌಡನ ಪಾಳ್ಯದ ಶಿವರಾಮಯ್ಯ, ಗಂಗಾಧರ್, ಕೆಂಪಾಪುರದ ನಿವಾಸಿಗಳಾದ ಕೆ.ಎಸ್.ನಟರಾಜು, ಉಗ್ರೇಗೌಡ, ಕಾಳಬೋರೇಗೌಡ, ಬೋರಯ್ಯ, ಮಂಜುನಾಥ್ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.