ADVERTISEMENT

ಕೆಂಪೇಗೌಡರ ಆಡಳಿತ ವೈಖರಿ ಮಾದರಿ: ಎಚ್.ಡಿ. ದೇವೇಗೌಡ

ನಾಡಪ್ರಭುವಿನ ಪ್ರತಿಮೆ ಅನಾವರಣ ಮಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 13:35 IST
Last Updated 16 ನವೆಂಬರ್ 2018, 13:35 IST
ವಿಜಯಪುರ ಹೋಬಳಿ ಕೋರಮಂಗಲ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಅನಾವರಣ ಮಾಡಿ ಮಾತನಾಡಿದರು
ವಿಜಯಪುರ ಹೋಬಳಿ ಕೋರಮಂಗಲ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಅನಾವರಣ ಮಾಡಿ ಮಾತನಾಡಿದರು   

ವಿಜಯಪುರ: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಆಡಳಿತ ವೈಖರಿ ಎಲ್ಲರಿಗೂ ಮಾದರಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ಹೋಬಳಿಯ ಕೋರಮಂಗಲ ಗ್ರಾಮದಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ’ ಮಾಡಿ ಅವರು ಮಾತನಾಡಿದರು.

ಅಭಿವೃದ್ಧಿಯ ಕಡೆಗೆ ನಮ್ಮ ಚಿಂತನೆ ಇರಬೇಕು. ಕೆಂಪೇಗೌಡರು ಕೇವಲ ಒಂದು ಜಾತಿ, ವರ್ಗ, ಜನಾಂಗದ ಅಭಿವೃದ್ಧಿಗಾಗಿ ಚಿಂತನೆ ನಡೆಸಿದವರಲ್ಲ; ಮನುಕುಲದ ಕುರಿತು ಚಿಂತನೆ ನಡೆಸಿದವರು. ಕೆಂಪಾಂಬುದಿ ಕೆರೆ ನಿರ್ಮಾಣ ಮಾಡುವ ಮೂಲಕ ನೀರಾವರಿಗೆ ಅವರು ಕೊಟ್ಟ ಕೊಡುಗೆ ಮರೆಯುವಂತಿಲ್ಲ. ಬಯಲುಸೀಮೆ ಭಾಗದ ಜನರಿಗೆ ಅನುಕೂಲವಾಗುವಂತೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಮುಂದಾಗುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ADVERTISEMENT

ಒಕ್ಕಲಿಗ ಸಮುದಾಯವರು ಎಲ್ಲಾ ಜನಾಂಗದವರೊಟ್ಟಿಗೆ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸಮುದಾಯದ ನಾಯಕರುಗಳ ಪ್ರತಿಮೆಗಳನ್ನು ಅನಾವರಣಗೊಳಿಸಿದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವಿಲ್ಲ. ಕೆಂಪೇಗೌಡರಂತಹ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದರು.

‘ರಾಜಕೀಯದ ಗಾಂಧಗಾಳಿಯೇ ಗೊತ್ತಿಲ್ಲದ ನನಗೆ ದೇವೇಗೌಡರು, ತಂದೆಯ ಸ್ಥಾನದಲ್ಲಿ ನಿಂತು ಕೊನೆಯ ಮಗನಂತೆ ಟಿಕೆಟ್ ಕೊಟ್ಟು ಆಶೀರ್ವಾದ ಮಾಡಿದರು. ಅವರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದ ಶಾಸಕನಾಗಿ ಎಲ್ಲ ಸಮುದಾಯಗಳ ಏಳಿಗೆಗಾಗಿ ಸದಾ ಶ್ರಮಿಸುತ್ತೇನೆ. ಕೋರಮಂಗಲದ ಅಭಿವೃದ್ಧಿಗಾಗಿ ಅಗತ್ಯವಾಗಿರುವ ಅನುದಾನಗಳನ್ನು ಕೊಡುತ್ತೇನೆ. ಮುಂದಿನ ದಿನಗಳಲ್ಲೂ ಹೀಗೆ ನನಗೆ ಬೆಂಬಲವಾಗಿ ನಿಲ್ಲಬೇಕು’ ಎಂದು ಕೋರಿದರು.

ಜೆಡಿಎಸ್ ಮುಖಂಡ ಪಾಳ್ಯದ ಮುನೇಗೌಡ ಮಾತನಾಡಿ, ಬಯಲುಸೀಮೆ ಭಾಗದ ರೈತರು ಸ್ವಾಭಿಮಾನಿಗಳು. ನೀರಿನ ಸೌಲಭ್ಯ ಇಲ್ಲದೆ ಸಾಕಷ್ಟು ಶ್ರಮಪಡುತ್ತಿದ್ದಾರೆ. ಚನ್ನಪಟ್ಟಣದ ಮಾದರಿಯಲ್ಲಿ ಬಯಲುಸೀಮೆ ಭಾಗಕ್ಕೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿದರೆ ಭೂಮಿಯಲ್ಲಿ ಚಿನ್ನ ಬೆಳೆಯುತ್ತಾರೆ. ಆದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕೆಂಪೇಗೌಡ ಅವರ ಪ್ರತಿಮೆಗೆ ಹೂ ಎರಚಿದ ಎಚ್.ಡಿ.ದೇವೇಗೌಡ ಅವರು, ತಲೆಬಾಗಿ ನಮಸ್ಕರಿಸಿದರು. ಮಂಗಳವಾದ್ಯಗಳೊಂದಿಗೆ ಅವರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.

ವಿಧಾನಪರಿಷತ್ ಸದಸ್ಯ ಕಾಂತರಾಜು, ಬಮೂಲ್ ಉಪಾಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್, ಜಿ.ಎ.ರವೀಂದ್ರ, ಬಿ.ಮುನೇಗೌಡ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಕೆ.ಸಿ.ವೆಂಕಟೇಗೌಡ, ಎಂ.ವೀರಪ್ಪ, ಕಲ್ಯಾಣ್ ಕುಮಾರ್, ಭರತ್, ಚಿಕ್ಕಬಚ್ಚೇಗೌಡ, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಪರಾಜು, ಪಾರಿಜಾತಭೈರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಭೈರೇಗೌಡ, ಎಂ.ಶಿವಾನಂದ್, ಕೊಂಡಪ್ಪ, ಯುವಕ ಸಂಘದ ಅಧ್ಯಕ್ಷ ಕೆ.ವಿ.ಮನ್ಮಥ್ ಕುಮಾರ್, ಚಿಕ್ಕರಾಜು, ಲಕ್ಷ್ಮೀನಾರಾಯಣ, ಕೆ.ಎಂ.ಚಂದ್ರಶೇಖರ್, ಎಸ್.ವೆಂಕಟರಾಜು, ಕೆಂಪೇಗೌಡ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.