ADVERTISEMENT

ಕೆಂಗಲ್: ವಿಜೃಂಭಣೆಯ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 13:57 IST
Last Updated 19 ಜನವರಿ 2019, 13:57 IST
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ನ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ನ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು   

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೆಂಗಲ್‌ನ ಆಂಜನೇಯಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ರಥಾಂಗ ಹೋಮ, ಯಾತ್ರಾದಾನ, ಮಂಟಪೋತ್ಸವ, ಬಲಿಪ್ರಧಾನ, ಗೋವು ಹಾಗೂ ಅಶ್ವಪೂಜೆ, ಪೂಜಾ ಕುಣಿತ, ತಮಟೆ, ಡೊಳ್ಳುಕುಣಿತ, ತೋಮಾಲಸೇವೆ ಮುಂತಾದ ಕಾರ್ಯಕ್ರಮಗಳು ನಡೆದವು.

ತಹಶೀಲ್ದಾರ್ ಯೋಗಾನಂದ ಪೂಜೆ ಸಲ್ಲಿಸುವುದರ ಮೂಲಕ ಸರ್ಕಾರಿ ಸೇವೆ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ ಹಲವು ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ADVERTISEMENT

ಭಕ್ತಾದಿಗಳು ರಥವನ್ನು ದೇವಸ್ಥಾನದ ಆವರಣ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಎಳೆದು ಪುನೀತರಾದರು. ರಾಜ್ಯದ ಹಲವಾರು ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು ಕಾಯಿ ಜವನ ಅರ್ಪಿಸಿದರು.

ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ವಸಂತೋತ್ಸವ, ಅಶ್ವವಾಹನೋತ್ಸವ, ಪುಷ್ಪಮುಡಿ ಉತ್ಸವ, ಧ್ವಜಾರೋಹಣ, ಪೂರ್ಣಾಹುತಿ, ಪುಷ್ಪಯಾಗ ಕಾರ್ಯಕ್ರಮಗಳು ನೆರವೇರಿದವು. ಆಂಜನೇಯಸ್ವಾಮಿಗೆ ಜಾತ್ರೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಬ್ರಹ್ಮರಥೋತ್ಸವದಲ್ಲಿ ಜಿಲ್ಲೆಯ ಹಾಗೂ ತಾಲ್ಲೂಕಿನ ಹಲವಾರು ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳು ಭಾಗವಹಿಸಿದ್ದರು.

ಬ್ರಹ್ಮರಥೋತ್ಸವದ ಜೊತೆಗೆ ಇತಿಹಾಸ ಪ್ರಸಿದ್ಧ ಕೆಂಗಲ್ ದನಗಳ ಜಾತ್ರೆಯು ಶನಿವಾರ ಅಂತ್ಯವಾಯಿತು. ದನಗಳ ಜಾತ್ರೆಗೆ ಇನ್ನು ಎರಡು ದಿನಗಳು ಬಾಕಿ ಇದ್ದರೂ ಶನಿವಾರವೇ ಅಂತ್ಯ ಕಂಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.