ADVERTISEMENT

ಇಡೀ ದಿನ ಮೂಲ ದಾಖಲೆ ಪರಿಶೀಲನೆ; ಹೇಳಿಕೆ ದಾಖಲು

ಎಚ್‌ಡಿಕೆ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 19:33 IST
Last Updated 15 ಏಪ್ರಿಲ್ 2025, 19:33 IST
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯ 7 ಸರ್ವೆ ನಂಬರ್‌ಗಳಲ್ಲಿನ ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ, ಮೂಲ ದಾಖಲೆಗಳನ್ನು ಹಾಜರುಪಡಿಸಲು ತಹಶೀಲ್ದಾರ್‌ ಕಚೇರಿಗೆ ಮಂಗಳವಾರ ಬಂದಿದ್ದ ಖಾತೆದಾರರು
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯ 7 ಸರ್ವೆ ನಂಬರ್‌ಗಳಲ್ಲಿನ ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ, ಮೂಲ ದಾಖಲೆಗಳನ್ನು ಹಾಜರುಪಡಿಸಲು ತಹಶೀಲ್ದಾರ್‌ ಕಚೇರಿಗೆ ಮಂಗಳವಾರ ಬಂದಿದ್ದ ಖಾತೆದಾರರು   

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಮಂಗಳವಾರ ರಾಮನಗರ ತಹಶೀಲ್ದಾರ್‌ ಕಚೇರಿಯಲ್ಲಿ ಜಮೀನುಗಳ ಮೂಲ ಮಂಜೂರು ದಾಖಲೆಗಳ ಪರಿಶೀಲನೆ ನಡೆಯಿತು.

ಸರ್ವೆ ನಂ.7,8,9,10,16,17 ಹಾಗೂ 79 ಸೇರಿದಂತೆ ಒಟ್ಟು ಏಳು ಸರ್ವೆ ನಂಬರ್‌ಗಳಲ್ಲಿ 80 ಮಂದಿ ಹೊಂದಿರುವ ಜಮೀನಿನ ಹಕ್ಕಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ತಹಶೀಲ್ದಾರ್ ತೇಜಸ್ವಿನಿ ತಮ್ಮ ಕಚೇರಿಯಲ್ಲಿ ಪರಿಶೀಲಿಸಿದರು.

ಅಷ್ಟೂ ಸರ್ವೆ ನಂಬರ್‌ ಜಮೀನುಗಳ ಖಾತೆದಾರರು ಹೊಂದಿರುವ ಮೂಲ ದಾಖಲೆ ಪರಿಶೀಲನೆ ಬಳಿಕ ಮಾಲೀಕರು ಹಾಜರುಪಡಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್‌ ಮಾಡಿಕೊಂಡರು. ಜಮೀನು ಮಂಜೂರು ಕುರಿತು ಪ್ರತಿಯೊಬ್ಬ ಖಾತೆದಾರರ ಹೇಳಿಕೆ ದಾಖಲಿಸಿಕೊಂಡರು.  

ADVERTISEMENT

ಮಧ್ಯಾಹ್ನ ಊಟದ ಬಿಡುವೂ ಪಡೆಯದೆ ಬೆಳಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ದಾಖಲೆ ಪರಿಶೀಲಿಸಿ, ಹೇಳಿಕೆ ಪಡೆಯುವ ಪ್ರಕ್ರಿಯೆ ನಡೆಯಿತು. ಇಡೀ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಲಾಯಿತು. 

ನೋಟಿಸ್ ಪಡೆದವರ ಪೈಕಿ ಸುಮಾರು 45 ಖಾತೆದಾರರು ಇಲ್ಲವೇ ಅವರ ಪ್ರತಿನಿಧಿಗಳು ಕಚೇರಿಗೆ ಬಂದಿದ್ದರು. ಕೆಲ ನೋಟಿಸ್‌ಗಳು ಕಚೇರಿಗೆ ವಾಪಸ್ ಬಂದಿವೆ. ಕೆಲವರು ವಕೀಲರೊಂದಿಗೆ ಕಚೇರಿಗೆ ಬಂದು ದಾಖಲೆ ಸಲ್ಲಿಸಲು ಬೇರೆ ದಿನಾಂಕ ಪಡೆದು ಹೋದರು ಎಂದು ಮೂಲಗಳು ತಿಳಿಸಿವೆ.

ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವುದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್, ಕರ್ನಾಟಕ ಭೂ ಕಂದಾಯ ಅಧಿನಿಯಮ–1964ರ ಕಲಂ 28ರಡಿ ಏಳು ಸರ್ವೆ ನಂಬರ್‌ಗಳ ಜಮೀನುಗಳ ಖಾತೆದಾರರಿಗೆ ಏ. 5ರಂದು ನೋಟಿಸ್ ಜಾರಿಗೊಳಿಸಿದ್ದರು.

ದಾಖಲೆ ಒದಗಿಸಲು ಸೂಚಿಸಿದ್ದ ಕೋರ್ಟ್: ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆಗಾಗಿ ತಹಶೀಲ್ದಾರ್, ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮಾರ್ಚ್ 18ರಂದು ನೋಟಿಸ್‌ ನೀಡಿದ್ದರು. ಈ ಸಂಬಂಧ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ನೋಟಿಸ್‌ ಅನುಸಾರ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಆದೇಶಿಸಿತ್ತು.

ಇದೇ ತಿಂಗಳ 8ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ ತಮ್ಮ ಬಳಿ ಹೊಂದಿರುವ ಭೂ ದಾಖಲೆಗಳನ್ನು ಅರ್ಜಿದಾರ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಒಂದು ವಾರದಲ್ಲಿ ಒದಗಿಸಬೇಕು. ದಾಖಲೆ ಪಡೆದ ಎರಡು ವಾರಗಳಲ್ಲಿ ಕುಮಾರಸ್ವಾಮಿ ಅವರು ತಹಶೀಲ್ದಾರ್‌ ಅವರಿಗೆ ಪ್ರತ್ಯುತ್ತರ ನೀಡಬೇಕು ಎಂದು ಆದೇಶ ನೀಡಿತ್ತು.

ನೋಟಿಸ್‌ನಲ್ಲಿ ಏನಿದೆ?

ಕೇತಗಾನಹಳ್ಳಿಯ ಸರ್ಕಾರಿ ಜಮೀನುಗಳಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚಿಸಲಾಗಿದೆ. ತಂಡದ ತನಿಖೆ ಪ್ರಗತಿಯಲ್ಲಿರುವುದರಿಂದ ಪ್ರಸ್ತಾಪಿತ ಸರ್ವೆ ನಂಬರ್‌ಗಳಲ್ಲಿ ನಡೆದಿರುವ ವಹಿವಾಟಿಗೆ ಸಂಬಂಧಿಸಿದ ದಾಸ್ತಾವೇಜುಗಳು ಹಾಗೂ ಸಾಕ್ಷ್ಯಾಧಾರಗಳ ಪರಿಶೀಲನೆಗಾಗಿ ಖಾತೆದಾರರಿಗೆ ಸಮನ್ಸ್ ನೀಡುವ ಅಗತ್ಯವಿರುತ್ತದೆ. ಗ್ರಾಮದ ಉದ್ದೇಶಿತ ಸರ್ವೆ ನಂಬರ್‌ನ ಸರ್ಕಾರಿ ಗೋಮಾಳದ ಜಮೀನಿನಲ್ಲಿ ನಿಮಗೆ ಹಕ್ಕು ಹರಿದು ಬಂದಿರುವ ಬಗ್ಗೆ ತನಿಖೆ ಮಾಡಬೇಕಿದೆ. ಹಾಗಾಗಿ ಜಮೀನಿನ ಹಕ್ಕು ಪಡೆದಿರುವ ಬಗ್ಗೆ ಮೂಲ ಮಂಜೂರಿಗೆ ಸಂಬಂಧಿಸಿದ ದಾಖಲೆ ಹಾಜರುಪಡಿಸಲು ಹಾಗೂ ಮೂಲ ಮಂಜೂರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಏ. 15ರಂದು ಬೆಳಗ್ಗೆ ತಾಲ್ಲೂಕು ಕಚೇರಿ ನ್ಯಾಯಾಂಗ ಸಭಾಂಗಣಕ್ಕೆ ಖುದ್ದಾಗಿ ಅಥವಾ ಪ್ರತಿನಿಧಿ ಮೂಲಕ ಹಾಜರಾಗಬೇಕು ಎಂದು ತಹಶೀಲ್ದಾರ್ ನೋಟಿಸ್‌ನಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.