ರಾಮನಗರ: ನಗರದಲ್ಲಿರುವ ಮಡಿವಾಳ ಸಮುದಾಯದ ಸುಮಾರು 45 ವೃತ್ತಿ ನಿರತರಿಗೆಗೆ ಅವರ ವೃತ್ತಿಗೆ ಪೂರಕವಾಗಿ ನಗರಸಭೆ ವತಿಯಿಂದ ಇಸ್ತ್ರಿ ಪೆಟ್ಟಿಗೆ, ಬೆಡ್‍ಶೀಟ್ ಸೇರಿದಂತೆ ಇತರ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಸೋಮವಾರ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಮೂರು ತಿಂಗಳಿನಲ್ಲೇ ವಿವಿಧ ವೃತ್ತಿನಿರತರಿಗೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಸವಿತಾ ಸಮಾಜದವರಿಗೂ ಕ್ಷೌರ ಕಿಟ್‌ಗಳನ್ನು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಛತ್ರಿಗಳನ್ನು ವಿತರಿಸಲಾಗಿದೆ’ ಎಂದರು.
‘ನಗರದಲ್ಲಿ ಸದ್ಯದಲ್ಲೇ ನಡೆಯಲಿರುವ ಬನ್ನಿ ಮಹಾಕಾಳಿ ಮತ್ತು ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ, ನಗರದ ಕೆಲವು ರಸ್ತೆಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಕಾರಣಕ್ಕೆ ನಗರಸಭೆಯಿಂದ ತುರ್ತು ಸಾಮಾನ್ಯ ಸಭೆ ಸಹ ನಡೆಸಿ, ತುರ್ತಾಗಿ ಆಗಬೇಕಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು’ ಎಂದು ತಿಳಿಸಿದರು.
‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಕಾಳಜಿಯಿಂದಾಗಿ ನಗರದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣವಾಗಿದೆ. ಅದರ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸದ್ಯದಲ್ಲೇ ಬಳಕೆಗೆ ಮುಕ್ತವಾಗಲಿದೆ’ ಎಂದು ಹೇಳಿದರು.
ಕಾಮಗಾರಿಗೆ ಚಾಲನೆ: ಬಂಡಿ ಮಹಾಕಾಳಿ ಮತ್ತು ಚಾಮುಂಡೇಶ್ವರಿ ಕಗರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ರಸ್ತೆ ದುರಸ್ತಿ ಕಾಮಗಾರಿಗಳನ್ನು ಶೇಷಾದ್ರಿ ಅವರು ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಬಾಲಗೇರಿ ಮತ್ತು ಚಾಮುಂಡೇಶ್ವರಿ ಬಡಾವಣೆಯ ವಾರ್ಡ್‌ಗಳಲ್ಲಿ ಯುಐಡಿಎಫ್ ಮತ್ತು ಪ್ರವಾಹ ಪೀಡಿತ ಯೋಜನೆಯಡಿ ಕಾಂಕ್ರೀಟ್ ರಸ್ತೆ, ಡಾಂಬರೀಕರಣ ರಸ್ತೆ ಅಭಿವೃದ್ಧಿಗೆ ಶನಿವಾರ ಚಾಲನೆ ನೀಡಿದರು.
ಅನಿಲ ಮತ್ತು ಕುಡಿಯುವ ನೀರಿನ ಸಂಪರ್ಕಕ್ಕೆ ಅಳವಡಿಸಿದ ಪೈಪ್‌ಲೈನ್ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟಿದ್ದವು. ಇದರಿಂದ ಕರಗ ಮಹೋತ್ಸವ ನಡೆಸುವ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಬಾಲಗೇರಿ ಮತ್ತು ನಗರದ ಇತರ ರಸ್ತೆಗಳಲ್ಲಿ ಕರಗಗಳು ಓಡಾಟ ನಡೆಸುತ್ತವೆ. ಆಗ ಸಮಸ್ಯೆಯಾಗಬಾರದು ಎಂದು ಪ್ರತಿ ರಸ್ತೆಗೆ ಕಾಂಕ್ರೀಟ್ ಅಥವಾ ಆ ಪ್ರದೇಶದ ಅಗತ್ಯಕ್ಕೆ ತಕ್ಕಂತೆ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶೇಷಾದ್ರಿ ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಸೋಮಶೇಖರ್ ಮಣಿ, ಬಿ.ಸಿ. ಪಾರ್ವತಮ್ಮ, ಮೊಹಿನ್ ಪಾಷ, ಗಿರಿಜಮ್ಮ ಗುರುವೇಗೌಡ, ಅಕ್ಲಿಂ ಪಾಷ, ನಾಗಮ್ಮ, ವಿಜಯಕುಮಾರಿ, ಪೌರಾಯುಕ್ತ ಡಾ. ಜಯಣ್ಣ, ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನರಸಿಂಹರಾಜು, ಎಂಜಿನಿಯರ್ ನಿರ್ಮಲ, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ಮುಖಂಡರಾದ ಶಂಕರ್, ಶ್ರೀನಿವಾಸ್, ನಾರಾಯಣ್, ವಿಜಿ, ರಮೇಶ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.