ADVERTISEMENT

‘ರಾಷ್ಟ್ರೀಯ ವಿಪತ್ತು’ ಘೋಷಣೆಗೆ ಆಗ್ರಹ

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 13:48 IST
Last Updated 16 ಆಗಸ್ಟ್ 2019, 13:48 IST
ಐಜೂರು ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು
ಐಜೂರು ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು   

ರಾಮನಗರ: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪವನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಶುಕ್ರವಾರ ಇಲ್ಲಿನ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಜನರ ಸಾವು, ಲಕ್ಷಾಂತರ ಮನೆಗಳ ನಾಶ, ಸಾವಿರಾರು ಜಾನುವಾರುಗಳ ಕಣ್ಮರೆ, ಲಕ್ಷಾಂತರ ಹೆಕ್ಟೇರ್ ಭೂ ಪ್ರದೇಶದಲ್ಲಿ ಸಮೃದ್ದವಾದ ಮಣ್ಣು ಕೊಚ್ಚಿ ಹೋಗಿದ್ದು, ₨1 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಕಣ್ಣಾರೆ ಕಂಡುಬಂದಿದ್ದರೂ ಕೇಂದ್ರ ಸರ್ಕಾರ ಈವರೆಗೆ ಪರಿಹಾರ ಘೋಷಿಸಿಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಏಕವ್ಯಕ್ತಿ ಸರ್ಕಾರ ಮಾತ್ರ ಸ್ಥಳ ಪರಿಶೀಲನೆಯಲ್ಲೇ ಮುಳುಗಿ ಹೋಗಿದೆ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಲ್. ರಮೇಶ್ ಗೌಡ ಆರೋಪಿಸಿದರು.

ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಬಿಡುಗಡೆ ಮಾಡಿರುವ ₨100 ಕೋಟಿ ಹಣದಲ್ಲೇ ಈಗ ತಕ್ಷಣದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇದರ ಹೊರತಾಗಿ ಸಂಘ ಸಂಸ್ಥೆಗಳು, ವ್ಯಕ್ತಿಗಳು ನೀಡಿರುವ ಕೊಡುಗೆಯೇ ದೊಡ್ಡ ಮೊತ್ತವಾಗಿದೆ. ಕೂಡಲೇ ರಾಷ್ಟ್ರೀಯ ವಿಪತ್ತು ಘೋಷಿಸಲು ಮುಖ್ಯಮಂತ್ರಿಗಳು ಕೂಡಲೇ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಒಂದು ವೇಳೆ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಲಾಗದಿದ್ದರೆ ಒಕ್ಕೂಟ ವ್ಯವಸ್ಥೆಯಿಂದ ಹೊರಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಎಲ್ಲಾ ಜಲಾಶಯಗಳು ತುಂಬಿದ್ದು, ತಮಿಳುನಾಡಿಗೆ ಕೆಆರ್ ಎಸ್ ನಿಂದ ಸಾವಿರಾರು ಕ್ಯೂಸೆಕ್‌ ನೀರನ್ನು ಬಿಡಲಾಗುತ್ತಿದೆ. ಆದ್ದರಿಂದ ಈ ಕೂಡಲೇ ಕಾವೇರಿ ಕೊಳ್ಳದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು. ಜತೆಗೆ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ನೆರೆ ಸಂತ್ರಸ್ತರನ್ನು 'ಗಂಜಿ ಕೇಂದ್ರ'ಗಳಲ್ಲಿ ಆಶ್ರಯ ನೀಡಲಾಗಿದೆ ಎನ್ನುವ ಬದಲಿಗೆ 'ಕಾಳಜಿ ಕೇಂದ್ರ' ಗಳೆಂದು ಮಾರ್ಪಡು ಮಾಡಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಗೌಡ, ಪದಾಧಿಕಾರಿಗಳಾದ ಬೆಂಕಿ ಶ್ರೀಧರ್, ರಂಜಿತ್ ಗೌಡ, ಪ್ರಕಾಶ್, ಸತೀಶ್, ಆಣಿಗೆರೆ ಸಿದ್ದರಾಜು, ರೋಸಿ, ಶೋಭಾಸಿಂಗ್, ಸುಮಾ, ಮಮತಾ, ಡಾ. ರಾಜ್ ಕಲಾ ಬಳಗದ ಅಧ್ಯಕ್ಷ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.