ADVERTISEMENT

ಡಿಕೆಶಿ ದಾಳಿಗೂ ಬಿಜೆಪಿಗೂ ಸಂಬಂಧ ಇಲ್ಲ: ಕೋಟಾ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 4:06 IST
Last Updated 30 ಸೆಪ್ಟೆಂಬರ್ 2022, 4:06 IST

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಗಳ ಮೇಲಿನ ಸಿಬಿಐ ದಾಳಿಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದರು.

ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಇ.ಡಿ, ಐ.ಟಿ, ಸಿಬಿಐ ಸ್ವತಂತ್ರ ಸಂಸ್ಥೆಗಳು. ಅವು ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಶಿವಕುಮಾರ್ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ಇಲ್ಲವೇ ಆರೋಪ ಮುಕ್ತರಾಗುತ್ತಾರೆ. ಡಿ.ಕೆ.ಶಿವಕುಮಾರ್ ತಪ್ಪು ಮಾಡಿದ್ದರೆ ಶಿಕ್ಷೆಗೆ ಒಳಗಾಗುತ್ತಾರೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಇಂತಹ ದಾಳಿಗಳು ನಡೆದಿದ್ದವು ಎಂದರು.

‘ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಯೇ ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ನಿಷೇಧಿಸಿದೆ. ಇದರ ಮೇಲೆ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿ.ಎಂ. ಇಬ್ರಾಹಿಂ ಅವರಿಗೆ ಯಾಕಿಷ್ಟು ಪ್ರೀತಿ?’ ಎಂದು ಅವರು ಪ್ರಶ್ನಿಸಿದರು.

ADVERTISEMENT

ಪಿಎಫ್‍ಐ ಬ್ಯಾನ್ ಮಾಡಿದರೆ ಶಾಂತಿ ನೆಲೆಸಲ್ಲ ಎಂದು ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆರ್‌ಎಸ್‍ಎಸ್ ಅಂದರೆ ರಾಷ್ಟ್ರ ಭಕ್ತಿಯ ತಂಡ ಎಂದು ನೆಹರು ಅವರೇ ಕರೆದಿದ್ದಾರೆ. ಇದನ್ನು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿಗೆ ನೆನಪಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.