ಮಾಗಡಿ: ಪಂಚಾಯಿತಿಗೊಂದು ಮಾದರಿ ಶಾಲೆ ಮಾಡುವ ನಿಟ್ಟಿನಲ್ಲಿ ಮಾಗಡಿ ತಾಲ್ಲೂಕಿಗೆ 5 ಕೆಪಿಎಸ್‌ಸಿ ಶಾಲೆ ಮಂಜೂರಾತಿ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ತಾಲ್ಲೂಕಿನ ನೇತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಕಾಮಗಾರಿ ಶಂಕುಸ್ಥಾಪನೆ, ಪಟ್ಟಣದಲ್ಲಿ ಗುರುಭವನ ನಿರ್ಮಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿ, ಸಮನ್ವಯ ಅಧಿಕಾರಿಗಳ ಕಟ್ಟಡ ಶಂಕುಸ್ಥಾಪನೆ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಾಯಿತಿಗೊಂದು ಮಾದರಿ ಶಾಲೆ ಮಾಡುವ ನಿಟ್ಟಿನಲ್ಲಿ ಈ ವರ್ಷ 500 ಕೆಪಿಎಸ್‌ಸಿ ಶಾಲೆ ನಿರ್ಮಾಣ ಮಾಡಲಾಗುವುದು. ಅದರಲ್ಲಿ ಮಾಗಡಿ ತಾಲ್ಲೂಕಿಗೆ ಐದು ಶಾಲೆಗಳನ್ನು ಮಂಜೂರಾತಿ ಮಾಡುತ್ತೇನೆಂದು ಭರವಸೆ ನೀಡಿದರು.
ದೇಶದಲ್ಲೇ ಎಸ್ಎಸ್ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಗಾಗಿ ಮೂರು ಬಾರಿ ಪರೀಕ್ಷೆಗಳನ್ನು ಬರೆಸಲಾಗುತ್ತಿದೆ. ಯಾವ ವಿದ್ಯಾರ್ಥಿಯೂ ಅನುತ್ತೀರ್ಣರಾಗಿ ವಿದ್ಯಾಭ್ಯಾಸ ಕಡಿತಗೊಳಿಸಬಾರದು. ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಉಚಿತವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ನಾನು ಎರಡನೇ ಬಾರಿಗೆ ಶಾಸಕನಾಗಿದ್ದು, ಹಲವು ಭಾರಿ ಚುನಾವಣೆಯಲ್ಲಿ ಸೋತ್ತಿದ್ದೇನೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನನಗೆ ಮೊದಲ ಭಾರಿಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಇಲಾಖೆಯಲ್ಲಿ ಎರಡು ಉತ್ತಮ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇನೆ. ಶಾಸಕ ಬಾಲಕೃಷ್ಣ ಅವರು ಹಿರಿಯರಾಗಿದ್ದು, ಅವರ ಸೇವೆ ಮಾಗಡಿಗೆ ಸೀಮಿತವಾಗದೆ ರಾಜ್ಯಕ್ಕೂ ವಿಸ್ತರಿಸಲಿ. ಬೇಕಾದರೆ ನನ್ನ ಖಾತೆಯನ್ನೇ ಅವರಿಗೆ ನೀಡಲು ಸಿದ್ಧನಿದ್ದೇನೆ. ಇದನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
ಶಾಸಕ ಬಾಲಕೃಷ್ಣ ಮಾತನಾಡಿ, ಸರ್ಕಾರಿ ಗ್ಯಾರಂಟಿಗಳಿಗೆ ಸೀಮಿತವಾಗದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇನ್ನು 6 ತಿಂಗಳಲ್ಲಿ ಗುರುಭವನ ನಿರ್ಮಾಣವಾಗಲಿದೆ. ಎಚ್.ಎಂ.ರೇವಣ್ಣ ಅವರು ಓದಿದ ಜಿಕೆಬಿಎಂಎಸ್ ಶಾಲೆಯನ್ನು ಕೆಪಿಎಸ್‌ಸಿ ಶಾಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಫಲಿತಾಂಶ ಬರಬೇಕಾದರೆ ಶಿಕ್ಷಕರಿಗೆ ಮೊಟ್ಟೆ, ತರಕಾರಿ ತರುವ ಕೆಲಸವನ್ನು ಎಸ್‌ಡಿಎಂಸಿ ಸದಸ್ಯರಿಗೆ ವಹಿಸಿ ಕೇವಲ ಪಾಠ ಮಾಡುವ ಕೆಲಸವನ್ನು ನೀಡಿ. ಆಗ ಉತ್ತಮ ಫಲಿತಾಂಶ ಬರುತ್ತದೆ. ಕೆಪಿಎಸ್‌ಸಿ ಶಾಲೆ ಮಾಡಿ ಪ್ರತಿ ವಿಷಯವಾರು ಶಿಕ್ಷಕರನ್ನು ನೇಮಿಸಿ. ಆ ಭಾಗಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿಕೊಡಿ ಉತ್ತಮ ಫಲಿತಾಂಶ ಬರುತ್ತದೆ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ, ಎಂಎಲ್‌ಸಿ ರಾಮೋಜಿ ಗೌಡ, ತಹಶೀಲ್ದಾರ್ ಶರತ್ ಕುಮಾರ್, ಜೈಪಾಲ್, ಚಂದ್ರಶೇಖರ್, ರಮ್ಯ ನರಸಿಂಹಮೂರ್ತಿ, ಜಯರಾಂ, ಕಲ್ಕರೆ ಶಿವಣ್ಣ, ನರಸಿಂಹಮೂರ್ತಿ, ಎಂ.ಕೆ.ಧನಂಜಯ್ಯ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.