ADVERTISEMENT

ಭರದಿಂದ ಸಾಗಿದೆ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ

ಅಧಿಕಾರಿಗಳಿಂದ ರೈತರ ಮನವೊಲಿಕೆ: ಶೇ 100ರಷ್ಟು ಸಾಧನೆಯ ಗುರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 6:14 IST
Last Updated 17 ಅಕ್ಟೋಬರ್ 2019, 6:14 IST
ರಾಮನಗರ ತಾಲ್ಲೂಕಿನ ಅರೇಹಳ್ಳಿಯಲ್ಲಿ ಬುಧವಾರ ಜಾನುವಾರುಗಳಿಗೆ ಲಸಿಕೆ ಹಾಕಿದ ಸಿಬ್ಬಂದಿ ಕಾಲುಬಾಯಿ ಜ್ವರದ ಕುರಿತು ಜನರಿಗೆ ಅರಿವು ಮೂಡಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ವರದರಾಜು, ಡಾ. ವಿಜಯಲಕ್ಷ್ಮಿ, ಡಾ. ತೇಜಸ್ವಿನಿ, ಡಾ. ನೇತ್ರಾ, ಪಶುಪಾಲನಾ ಇಲಾಖೆಯ ಸಿಬ್ಬಂದಿ ಹಾಗೂ ಡೇರಿ ಸಿಬ್ಬಂದಿ ಇದ್ದರು
ರಾಮನಗರ ತಾಲ್ಲೂಕಿನ ಅರೇಹಳ್ಳಿಯಲ್ಲಿ ಬುಧವಾರ ಜಾನುವಾರುಗಳಿಗೆ ಲಸಿಕೆ ಹಾಕಿದ ಸಿಬ್ಬಂದಿ ಕಾಲುಬಾಯಿ ಜ್ವರದ ಕುರಿತು ಜನರಿಗೆ ಅರಿವು ಮೂಡಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ವರದರಾಜು, ಡಾ. ವಿಜಯಲಕ್ಷ್ಮಿ, ಡಾ. ತೇಜಸ್ವಿನಿ, ಡಾ. ನೇತ್ರಾ, ಪಶುಪಾಲನಾ ಇಲಾಖೆಯ ಸಿಬ್ಬಂದಿ ಹಾಗೂ ಡೇರಿ ಸಿಬ್ಬಂದಿ ಇದ್ದರು   

ರಾಮನಗರ: ಜಾನುವಾರುಗಳನ್ನು ತೀವ್ರವಾಗಿ ಬಾಧಿಸುವ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಅಭಿಯಾನವು ಜಿಲ್ಲೆಯಾದ್ಯಂತ ಭರದಿಂದ ಸಾಗಿದೆ.

ಇದೇ 14ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನವೆಂಬರ್‌ 4ರವರೆಗೂ ಮುಂದುವರಿಯಲಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯು ಪಲ್ಸ್‌ ಪೋಲಿಯೊ ಮಾದರಿಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ.

ಲಸಿಕೆ ಯಾಕೆ ಬೇಕು?: 2013–-14ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 1,300ಕ್ಕೂ ಹೆಚ್ಚು ರಾಸುಗಳು ಕಾಲುಬಾಯಿ ಜ್ವರಕ್ಕೆ ಬಲಿಯಾಗಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರವು ರಾಸುಗಳಿಗೆ ಕಾಲುಬಾಯಿ ಜ್ವರ ವಿರುದ್ಧದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಚಾಲನೆ ನೀಡಿತ್ತು. ಪ್ರಸ್ತುತ ವರ್ಷಕ್ಕೆರಡು ಬಾರಿಯಂತೆ (ಮಾರ್ಚ್ ಮತ್ತು ಆಗಸ್ಟ್) 15 ಸುತ್ತುಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆದಿದೆ. ಇದೀಗ 16ನೇ ಸುತ್ತಿನ ಕಾರ್ಯಕ್ರಮ ಚಾಲ್ತಿಯಲ್ಲಿದೆ.

ADVERTISEMENT

ಈ ಅಭಿಯಾನಕ್ಕೆ ಪಶುಪಾಲನಾ ಇಲಾಖೆಯ ಜೊತೆಗೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮೂಲ್) ಕೈಜೋಡಿಸಿದೆ. ಕಳೆದ ಸುತ್ತಿನ ಅಭಿಯಾನಲ್ಲಿ ಜಿಲ್ಲೆಯಲ್ಲಿನ ಶೇ 98ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. ಈ ವರ್ಷ ಶೇ 100ರಷ್ಟು ಲಸಿಕೆ ಗುರಿ ಹೊಂದಲಾಗಿದೆ. ಹಳ್ಳಿಗಳಿಗೆ ತೆರಳಿ ಈಗಾಗಲೇ ಲಸಿಕೆ ಹಾಕಲಾಗುತ್ತಿದೆ. ಪ್ರತಿ ತಂಡಕ್ಕೆ ಒಬ್ಬ ಪಶು ವೈದ್ಯಾಧಿಕಾರಿಯನ್ನು ಮುಖ್ಯಸ್ಥರಾಗಿ ನೇಮಿಸಿ, ಎಲ್ಲ ತಂಡಗಳೊಂದಿಗೆ ತಲಾ ಒಂದೊಂದು ವಾಹನಗಳನ್ನು ಹಾಲು ಒಕ್ಕೂಟದಿಂದ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ ಜಾನುವಾರುಗಳಿಗಾಗಿ ಸರ್ಕಾರವು ಈಗಾಗಲೇ 2.92 ಲಕ್ಷ ಡೋಸ್ ಲಸಿಕೆಯನ್ನು ನೀಡಿದೆ. ಜಿಲ್ಲಾ ಪಶು ಆಸ್ಪತ್ರೆಯಲ್ಲಿನ ವಾಕ್ ಇನ್ ಕೂಲರ್‌ಗಳಲ್ಲಿ ದಾಸ್ತಾನು ಮಾಡಲಾಗಿದೆ. ಪ್ರತಿ ರಾಸುವಿಗೆ 2ಮಿ.ಲಿ. ಲಸಿಕೆಯನ್ನು ಹಾಕಲಾಗುತ್ತದೆ.

ಹಳ್ಳಿಗಳಲ್ಲಿ ಪ್ರಚಾರ: ಲಸಿಕಾ ಕಾರ್ಯಕ್ರಮದ ಬಗ್ಗೆ ಹಳ್ಳಿಗಳಲ್ಲಿ ಈಗಾಗಲೇ ಪ್ರಚಾರವೂ ನಡೆದಿದೆ. ಬ್ಯಾನರ್, ಪೋಸ್ಟರ್, ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಡೇರಿಗಳು, ಗ್ರಾ.ಪಂ.ಗಳಲ್ಲೂ ಕರಪತ್ರ ಅಂಟಿಸಲಾಗಿದೆ. ಹಳ್ಳಿಗಳಲ್ಲಿ ಲಸಿಕೆಯ ಹಿಂದಿನ ದಿನವೇ ಮೈಕ್ ಮೂಲಕ ಪ್ರಚಾರ ಮಾಡಿ, ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕಾಲುಬಾಯಿ ಜ್ವರ: ಏನಿದರ ಲಕ್ಷಣ?

ರಾಸುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗ. ಹಸು, ಎಮ್ಮೆ, ಹಂದಿ, ಕುರಿ/ಮೇಕೆ ಮುಂತಾದ ಪ್ರಾಣಿಗಳಲ್ಲಿ ವೈರಾಣುಗಳಿಂದ ಈ ರೋಗ ಕಾಣಿಸಿಕೊಳ್ಳುತ್ತಿದೆ. ಈ ರೋಗವು ಅತಿ ಬೇಗನೆ ರೋಗಗ್ರಸ್ತ ರಾಸುವಿನಿಂದ ಇನ್ನೊಂದು ರಾಸುವಿಗೆ ನೇರ ಸಂಪರ್ಕ, ಗಾಳಿ, ನೀರು ಮತ್ತು ಆಹಾರದ ಮೂಲಕ ಹರಡುತ್ತದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಇರುವುದಿಲ್ಲ. ಹೀಗಾಗಿ ಲಸಿಕೆ ಹಾಕಿಸುವ ಮೂಲಕ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಕಾಯಿಲೆಯನ್ನು ನಿಯಂತ್ರಿಸುವುದೊಂದೇ ಮಾರ್ಗವಾಗಿದೆ.

ಲಕ್ಷಣಗಳು: ರೋಗಗ್ರಸ್ತ ರಾಸುಗಳಲ್ಲಿ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಚಿಕ್ಕಚಿಕ್ಕ ನೀರುಗುಳ್ಳೆಗಳಾಗಿ ಕ್ರಮೇಣ ಈ ಗುಳ್ಳೆಗಳು ಒಡೆದು ಜೊಲ್ಲು ಸುರಿಯುತ್ತದೆ. ಅದರ ನೋವಿನಿಂದ ರಾಸುಗಳು ಮೇವು ಇನ್ನುವುದನ್ನು ಬಿಡುತ್ತವೆ. ಒಮ್ಮೊಮ್ಮೆ ನಾಲಿಗೆಯ ಮೇಲೆ ಹುಣ್ಣು ಹೆಚ್ಚಾಗಿ ಅದರ ಮೇಲ್ಪದರವೇ ಕಿತ್ತು ಬರುತ್ತದೆ. ಇದರಿಂದ ಆಹಾರ ಸೇವಿಸದ ರಾಸುವಿನ ಆರೋಗ್ಯ ಕ್ಷೀಣಿಸುತ್ತದೆ.

ಕಾಲಿನ ಗೊರಸಿನ ಮಧ್ಯದಲ್ಲೂ ಹುಣ್ಣುಗಳಾಗಿ ರಾಸುಗಳು ಕುಂಟಲು ಪ್ರಾರಂಭಿಸುತ್ತವೆ. ಕಾಲುಬಾಯಿ ಜ್ವರಕ್ಕೆ ತುತ್ತಾದ ರಾಸುಗಳಲ್ಲಿ ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತದೆ. ಗರ್ಭಧಾರಣೆ ಅವಕಾಶವೂ ಕಡಿಮೆಯಾಗಿ ರಾಸುಗಳಲ್ಲಿ ಬಂಜೆತನ ಉಂಟಾಗುತ್ತದೆ. ನಾಟಿ ತಳಿ ರಾಸುಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ಅಂಕಿ–ಅಂಶ
3.14 ಲಕ್ಷ–ಜಿಲ್ಲೆಯಲ್ಲಿನ ಜಾನುವಾರುಗಳ ಸಂಖ್ಯೆ
2.87 ಲಕ್ಷ–ಕಳೆದ ಬಾರಿಯ ಅಭಿಯಾನದಲ್ಲಿ ಲಸಿಕೆ ಹಾಕಿಸಿಕೊಂಡ ಜಾನುವಾರಗಳು
31 –ಲಸಿಕಾ ತಂಡಗಳ ರಚನೆ
242–ಲಸಿಕೆ ಹಾಕಲಿರುವ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.