ADVERTISEMENT

ವಾಲಿದ ವಿದ್ಯುತ್‌ ಕಂಬ: ಅಪಾಯ ಆಹ್ವಾನ

ಕಂಬ ಬದಲಾವಣೆಗೆ ಸಾಸಲಾಪುರ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:58 IST
Last Updated 21 ಸೆಪ್ಟೆಂಬರ್ 2021, 4:58 IST
ಸಾಸಲಾಪುರ ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ವಾಲಿರುವುದು
ಸಾಸಲಾಪುರ ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ವಾಲಿರುವುದು   

ಕನಕಪುರ: ತಾಲ್ಲೂಕಿನ ಸಾಸಲಾಪುರ ಗ್ರಾಮದ ಬಳಿಯ ಕಬ್ಬಾಳು–ಹೊನ್ನಿಗನಹಳ್ಳಿ ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬೀಳುವ ಸ್ಥಿತಿಯಲ್ಲಿದ್ದು, ಅಪಾಯಎದುರಾಗುವ ಮೊದಲುಕಂಬಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಬ್ಬಾಳು ರಸ್ತೆಯಲ್ಲಿ ಹೊಸದಾಗಿ ವಿದ್ಯುತ್‌ ಸಂಪರ್ಕ ಮಾರ್ಗ ಕಲ್ಪಿಸಲಾಗಿದೆ. ರಸ್ತೆಬದಿಯಲ್ಲಿ ವಿದ್ಯುತ್‌ ಕಂಬಗಳನ್ನು ನೆಟ್ಟಿದ್ದಾರೆ. ಆದರೆ, ಆಳವಾಗಿ ಗುಂಡಿ ತೆಗೆದು ಅಳವಡಿಸದ ಕಾರಣ ಬಹುತೇಕ ಕಂಬಗಳು ಅರ್ಧದಷ್ಟು ವಾಲಿದ್ದು ಬೀಳುವ ಸ್ಥಿತಿ ತಲುಪಿವೆ.

ಬೆಸ್ಕಾಂನಲ್ಲಿ ಒಂದೊಂದು ಪ್ರದೇಶಕ್ಕೆ ಲೈನ್‌ಮನ್‌ಗಳನ್ನು ನಿಯೋಜನೆ ಮಾಡಿದ್ದು, ಪ್ರತಿದಿನ ಅವರು ವಿದ್ಯುತ್‌ ಮಾರ್ಗದಲ್ಲಿ ಏನಾದರು ಸಮಸ್ಯೆ ಇದೆಯೇ ಎಂದು ಪರಿಶೀಲಿಸಬೇಕು. ಲೈನ್‌ ಕೆಳಗಡೆ ಮರ, ಗಿಡಗಳು ಬೆಳೆದರೆ ಅವುಗಳನ್ನು ತೆರವುಗೊಳಿಸಬೇಕು. ಎಲ್ಲಾದರೂ ಕಂಬಗಳು ಅಪಾಯದಲ್ಲಿದ್ದರೆ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು
ಸರಿಪಡಿಸಬೇಕು.

ADVERTISEMENT

ಆದರೆ ಕಬ್ಬಾಳು, ಹೊನ್ನಿಗನಹಳ್ಳಿ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಲೈನ್‌ಮನ್‌ಗಳು ಇದಾವುದನ್ನು ನೋಡದೆ ನಿರ್ಲಕ್ಷ್ಯವಹಿಸಿದ್ದಾರೆ. ಕಂಬಗಳು ವಾಲಿ ಬೀಳುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ರೈತರು.

ಮಳೆಗಾಲ ಆಗಿರುವುದರಿಂದ ಜೋರಾದ ಮಳೆ ಮತ್ತು ಗಾಳಿಗೆ ವಾಲಿರುವ ಕಂಬಗಳು ಬೀಳಲಿದ್ದು ಅಪಾಯ ಕಟ್ಟಿಟ್ಟಬುತ್ತಿ.ಇದರಿಂದ ಸಾವು, ನೋವು ಸಂಭವಿಸಬಹುದು. ಗ್ರಾಮಗಳ ಮಟ್ಟಿಗೆ ವಿದ್ಯುತ್‌ ಸರಬರಾಜು ನಿಲ್ಲಬಹುದು. ಆ ಕಾರಣದಿಂದ ಬೆಸ್ಕಾಂ ಹಿರಿಯ ಅಧಿಕಾರಿಗಳು ಕೂಡಲೇ ಅಪಾಯ ಆಹ್ವಾನಿಸುತ್ತಿರುವ ಕಂಬಗಳನ್ನು ಸರಿಪಡಿಸಬೇಕು ಎಂದು ಸಾಸಲಾಪುರ ಮತ್ತು ಹೊನ್ನಿಗನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.