ADVERTISEMENT

ರಾಮನಗರ: ಸರ್ಕಾರಿ ಶಾಲೆಯಲ್ಲೇ ಇಂಗ್ಲಿಷ್ ಕಲಿಕೆ!

ಈ ವರ್ಷ ಜಿಲ್ಲೆಯ 34 ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅನುಮತಿ: ಒಟ್ಟು ಸಂಖ್ಯೆ 68ಕ್ಕೆ ಏರಿಕೆ

ಆರ್.ಜಿತೇಂದ್ರ
Published 29 ಜುಲೈ 2021, 5:02 IST
Last Updated 29 ಜುಲೈ 2021, 5:02 IST

ರಾಮನಗರ: ಪೋಷಕರಲ್ಲಿ ಕಾನ್ವೆಂಟ್‌ ಶಿಕ್ಷಣದ ಮೋಹ ಕಡಿಮೆ ಮಾಡಿ, ಅವರನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಸಲುವಾಗಿ ಸರ್ಕಾರವು ಇಂಗ್ಲಿಷ್ ಮಾಧ್ಯಮ ಕಲಿಕೆಗೂ ಆದ್ಯತೆ ನೀಡತೊಡಗಿದೆ. ಈ ವರ್ಷ ಜಿಲ್ಲೆಯಲ್ಲಿ 34 ಶಾಲೆಗಳಲ್ಲಿ ಈ ಮಾಧ್ಯಮಕ್ಕೆ ಅನುಮತಿ ದೊರೆತಿದ್ದು, ಇಂತಹ ಶಾಲೆಗಳ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.

ರಾಜ್ಯ ಸರ್ಕಾರ 2019–20ನೇ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನೂ ಆರಂಭಿಸಿದೆ. ಜಿಲ್ಲೆಯಲ್ಲಿ ಮೊದಲ ವರ್ಷ 24 ಶಾಲೆಗಳಿಗೆ ಅನುಮತಿ ನೀಡಲಾಗಿತ್ತು. ಕೋವಿಡ್ ಕಾರಣಕ್ಕೆ 2020–21ನೇ ಸಾಲಿನಲ್ಲಿ ಶೈಕ್ಷಣಿಕ ತರಗತಿಗಳು ನಡೆಯದ ಕಾರಣ ಯಾವುದೇ ಶಾಲೆಗಳಿಗೆ ಅನುಮತಿ ದೊರೆತಿರಲಿಲ್ಲ. 2021–22ನೇ ಸಾಲಿನಲ್ಲಿ ಜಿಲ್ಲೆಯ 23 ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅವಕಾಶ ದೊರೆತಿದೆ. ಚನ್ನಪಟ್ಟಣ ತಾಲ್ಲೂಕಿನ 6, ಕನಕಪುರದ 5, ಮಾಗಡಿಯ 5 ಹಾಗೂ 7 ಶಾಲೆಗಳು ಇದರಲ್ಲಿ ಸೇರಿವೆ. ಇದಲ್ಲದೆ 11 ಉರ್ದು ಮಾಧ್ಯಮ ಶಾಲೆಗಳಲ್ಲೂ ಇಂಗ್ಲಿಷ್‌ ಕಲಿಕೆ ಆರಂಭಗೊಳ್ಳುತ್ತಿದೆ.

ಈ ಶಾಲೆಗಳಲ್ಲಿ 2019ರಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಕೆ ಆರಂಭಿಸಲಾಗಿತ್ತು. ಈ ವರ್ಷ ಅಂತಹ ಶಾಲೆಗಳಲ್ಲಿ ಮೂರನೇ ತರಗತಿವರೆಗೆ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಓದಲು ಅವಕಾಶ ಸಿಗಲಿದೆ. ಆಯ್ದ ಎಲ್ಲ ಶಾಲೆಗಳಲ್ಲಿಯೂ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭ ಆಗಲಿದ್ದು, ವರ್ಷಕ್ಕೆ ಒಂದೊಂದು ತರಗತಿ ಹೆಚ್ಚಿಸಿಕೊಂಡು ಹೋಗಲಾಗುತ್ತದೆ.

ADVERTISEMENT

ಜಿಲ್ಲೆಯಲ್ಲಿ ಎಲ್ಲೆಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಅವಕಾಶ ದೊರೆತಿದೆಯೋ ಅಲ್ಲೆಲ್ಲ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಎಲ್ಲ ಶಿಕ್ಷಕರಿಗೆ ಈಗಾಗಲೇ ಭಾಷಾ ಬೋಧನೆ ಕುರಿತು ತರಬೇತಿ ನೀಡಲಾಗಿದೆ. ಸರ್ಕಾರ ಹಂತ ಹಂತವಾಗಿ ಸೌಲಭ್ಯಗಳನ್ನು ಒದಗಿಸಲಿದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಪ್ರಸನ್ನಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.