ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿಯ ಅಕ್ಕೂರು ಗ್ರಾಮದಲ್ಲಿ ಎರಡು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಗ್ರಾಮದ ಆಸುಪಾಸಿನ ಬೆಟ್ಟಗುಡ್ಡಗಳಲ್ಲಿ ಚಿರತೆಗಳು ವಾಸಿಸುತ್ತಿವೆ. ಸಂಜೆಯಾದರೆ ಆಹಾರ ಅರಸಿ ಗ್ರಾಮದೊಳಗೆ ಬಂದು ಕುರಿ, ಹಸುವಿನ ಕರು, ಮೇಕೆ, ಕೋಳಿ, ಸಾಕು ನಾಯಿಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ಯುತ್ತಿದ್ದವು.
ನಸುಕಿನಲ್ಲಿ ಜನರ ಕಣ್ಣಿಗೂ ಬಿದ್ದಿದ್ದ ಚಿರತೆ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತ್ತು. ಜನರು ಸಂಜೆ ಮತ್ತು ನಸುಕಿನಲ್ಲಿ ಹೊರಗೆ ಬರಲು ಭಯಪಡುತ್ತಿದ್ದರು. ಆತಂಕ ಹುಟ್ಟಿಸಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಆ ಹಿನ್ನೆಲೆಯಲ್ಲಿ ಗ್ರಾಮದ ಚನ್ನಪ್ಪ ಎಂಬುವರ ಮನೆ ಹಿಂಭಾಗ ಇಲಾಖೆಯವರು ಮೂರು ದಿನಗಳ ಹಿಂದೆ ಬೋನು ಇಟ್ಟಿದ್ದರು.
ಆಹಾರ ಅರಸಿ ಬಂದಿದ್ದ ಚಿರತೆ ಬೋನಿನಲ್ಲಿ ಕೂಡಿ ಹಾಕಿದ್ದ ಕೋಳಿಗಳನ್ನು ತಿನ್ನಲು ಬೋನಿನೊಳಕ್ಕೆ ನುಗ್ಗಿ ಸೆರೆಯಾಗಿದೆ. ಚಿರತೆ ಸೆರೆಯಾಗಿರುವ ವಿಷಯವನನ್ಉ ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ತಿಳಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಬೋನು ಸಮೇತ ಚಿರತೆಯನ್ನು ಅರಣ್ಯದೊಳಕ್ಕೆ ಕೊಂಡೊಯ್ದು ಬಿಟ್ಟು ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.