ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛ ಭಾರತ್ ಮಿಷನ್ ಸೇರಿ ವಿವಿಧ ಸರ್ಕಾರದ ಸೌಲಭ್ಯಗಳು ಜನರಿಗೆ ವರದಾನವಾಗುವ ರೀತಿಯಲ್ಲಿ ಅಧಿಕಾರಿಗಳು ಕಾರ್ಯಗತಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನರೇಗಾ, ಸ್ವಚ್ಛ ಭಾರತ ಮಿಷನ್, ವಸತಿ ಯೋಜನೆ ಸೇರಿ ವಿವಿಧ ಯೋಜನೆಯ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಸೃಜನೆ, 2022-23ನೇ ಸಾಲಿನ ವೈಯಕ್ತಿಕ ಕಾಮಗಾರಿಗಳ ಪ್ರಗತಿ, ಅಮೃತ್ ಸರೋವರ ಯೋಜನೆಯ ಪ್ರಗತಿ, ಸಾಮಾಜಿಕ ಲೆಕ್ಕ ಪರಿಶೋಧನೆ ಮೊದಲಾದವುಗಳ ಕುರಿತು ಅವರು ಮಾಹಿತಿ ಪಡೆದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಸಮುದಾಯ ಮತ್ತು ವೈಯಕ್ತಿಕ ಶೌಚಾಲಯ ಜನರ ಉಪಯೋಗಕ್ಕೆ ಬರಬೇಕು. ದ್ರವ ಮತ್ತು ಘನತ್ಯಾಜ್ಯನಿರ್ವಹಣಾ ಘಟಕಗಳು ಪಂಚಾಯಿತಿ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕು. ಜೊತೆಗೆ 14-15ನೇ ಹಣಕಾಸು ಯೋಜನೆಯಡಿಬಾಕಿ ಉಳಿದಿರುವ ಅನುದಾನದ ಕಡೆ ಗಮನ ವಹಿಸಿ ಎಂದು ತಿಳಿಸಿದರು.
ಜಿ.ಪಂ. ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ಮಾತನಾಡಿ, ನರೇಗಾ ಯೋಜನೆಯಲ್ಲಿಮಾನವ ದಿನಗಳ ಸೃಜನೆ ಬಹಳ ಮುಖ್ಯ. ಈಗಾಗಲೇ ಜಿಲ್ಲೆಯಲ್ಲಿ ಅಮೃತ್ ಸರೋವರ ಯೋಜನೆ ಪ್ರಗತಿಯಲ್ಲಿದೆ. 75 ಕೆರೆಗಳ ಪೈಕಿ 20 ಕ್ಕೂ ಹೆಚ್ಚು ಕೆರೆಗಳ ಕಾಮಗಾರಿ ಮುಗಿದಿದೆ. ಉಳಿದ ಕೆರೆಗಳ ಕಾಮಗಾರಿ ಮುಂದುವರೆದಿದೆ ಶೀಘ್ರದಲ್ಲೇ ಕೆಲಸ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಯೋಜನಾ ನಿರ್ದೇಶಕರಾದ ಕೆ. ಸುಬ್ಬಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.