ADVERTISEMENT

ರಾತ್ರಿಯಿಡೀ ‘ಗೊಂದಲ’ ಎರಡು ತಾಸಿಗಿಳಿದಿದೆ...

‘ಲೋಕಸಿರಿ’ಯಲ್ಲಿ ಗೊಂದಲಿಗ ಸುಗತೇಕರ ಬೇಸರ; ಮನಸೂರೆಗೊಳಿಸಿದ ‘ಗೊಂದಲ’ ಗಾಯನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 6:55 IST
Last Updated 10 ಮಾರ್ಚ್ 2025, 6:55 IST
<div class="paragraphs"><p>ರಾಮನಗರದ&nbsp;ಜಾನಪದ ಲೋಕದಲ್ಲಿ ನಾಡೋಜ ಎಚ್‌.ಎಲ್. ನಾಗೇಗೌಡರ ನೆನಪಿನಾರ್ಥವಾಗಿ ಭಾನುವಾರ ನಡೆದ ‘ಲೋಕಸಿರಿ–103’ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗೊಂದಲಿಗ ಕಲಾವಿದ ಹನುಮಂತಪ್ಪ ವೆಂಕಪ್ಪ ಸುಗತೇಕರ ಅವರನ್ನು ಗಣ್ಯರು ಸನ್ಮಾನಿಸಿದರು. </p></div>

ರಾಮನಗರದ ಜಾನಪದ ಲೋಕದಲ್ಲಿ ನಾಡೋಜ ಎಚ್‌.ಎಲ್. ನಾಗೇಗೌಡರ ನೆನಪಿನಾರ್ಥವಾಗಿ ಭಾನುವಾರ ನಡೆದ ‘ಲೋಕಸಿರಿ–103’ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗೊಂದಲಿಗ ಕಲಾವಿದ ಹನುಮಂತಪ್ಪ ವೆಂಕಪ್ಪ ಸುಗತೇಕರ ಅವರನ್ನು ಗಣ್ಯರು ಸನ್ಮಾನಿಸಿದರು.

   

ರಾಮನಗರ: ‘ ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಗೊಂದಲ ಇದೀಗ ಎರಡು ತಾಸಿಗಿಳಿದಿದೆ. ಮದುವೆ, ತೊಟ್ಟಿಲು, ಜಾವಳ, ಗೃಹಪ್ರವೇಶದಂತಹ ಶುಭಕಾರ್ಯಗಳಲ್ಲಿ ರಾತ್ರಿಯಿಡೀ ಗೊಂದಲ ಹಾಡುತ್ತಿದ್ದೆವು. ನಮ್ಮ ಒಂದೊಂದು ಗೊಂದಲಗಳು ಮುಗಿಯಲು ಮೂರ್ನಾಲ್ಕು ತಾಸು ಬೇಕು. ಕಾಲ ಬದಲಾದಂತೆ ನಮ್ಮ ಗೊಂದಲದ ಅವಧಿಯೂ ಇಳಿದಿದೆ. ಮುಂಚಿನಂತೆ ಈಗ ರಾತ್ರಿಯಿಡೀ ಗೊಂದಲ ಕೇಳುವವರಿಲ್ಲ. ಹಾಗಾಗಿ, ನಮ್ಮ ಗೊಂದಲ ಎರಡು ತಾಸಿಗಿಳಿದಿದೆ....’

ಉತ್ತರ ಕರ್ನಾಟಕ ಭಾಗದ ವಿಶಿಷ್ಟ ಜಾನಪದ ಕಲೆಯಾದ ಗೊಂದಲ (ಗೋಂಧಳ) ಕಾಲದ ಅಲೆಗೆ ಸಿಕ್ಕಿ ಬದಲಾಗಿರುವುದರ ಕುರಿತು, ಬಾಗಲಕೋಟೆಯ ನವನಗರದ ಗೊಂದಲಿಗ ಕಲಾವಿದ ಹನುಮಂತಪ್ಪ ವೆಂಕಪ್ಪ ಸುಗತೇಕರ ಹಂಚಿಕೊಂಡರು. ಇಲ್ಲಿನ ಜಾನಪದ ಲೋಕದಲ್ಲಿ ನಾಡೋಜ ಎಚ್‌.ಎಲ್. ನಾಗೇಗೌಡರ ನೆನಪಿನಾರ್ಥವಾಗಿ ಭಾನುವಾರ ನಡೆದ ‘ಲೋಕಸಿರಿ–103’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ADVERTISEMENT

‘ಗೊಂದಲವು ತುಳಜಾಪುರದ ಅಂಬಾ ಭವಾನಿ ಹಾಗೂ ಸವದತ್ತಿಯ ಯಲ್ಲಮ್ಮ ದೇವಿಯನ್ನು ಸಂತುಷ್ಟಗೊಳಿಸಲು ಕೈಗೊಳ್ಳುವ ಭಕ್ತಿ ಸೇವೆಯಾಗಿದೆ. ಮನೆಗಳಲ್ಲಿ ಶುಭಕಾರ್ಯಕ್ಕೆ ಮೊದಲು ಅಥವಾ ಮುಕ್ತಾಯದ ಸಂದರ್ಭಗಳಲ್ಲಿ ರಾತ್ರಿ ಈ ಸೇವೆ ಹಮ್ಮಿಕೊಳ್ಳುತ್ತಾರೆ. ಆಹ್ವಾನದ ಮೇರೆಗೆ ನಾವು ಹೋಗಿ ರಾತ್ರಿಯಿಡೀ ಗೊಂದಲ ಹಾಕಿ ಬರುತ್ತಿದ್ದೆವು’ ಎಂದರು.

‘ತಲೆಮಾರುಗಳಿಂದ ಈ ಕಲೆಯನ್ನು ನಮ್ಮ ಮನೆತನ ಬದುಕಾಗಿಸಿಕೊಂಡು ಬಂದಿದೆ. ತಂದೆ ವೆಂಕಪ್ಪ ಸುಗತೇಕರ ಹಾಗೂ ತಾಯಿ ದುರ್ಗಾ ಬಾಯಿ ಅವರಿಂದ ನನಗೆ ಈ ಕಲೆ ಬಳುವಳಿಯಾಗಿ ಬಂದಿದೆ. 60 ವರ್ಷಗಳಿಂದ ಈ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಸಹೋದರ ಹಾಗೂ ಮಕ್ಕಳು ಸಹ ನನಗೆ ಸಾಥ್ ನೀಡುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ನಮ್ಮ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು’ ಎಂದು ಹಿನ್ನೆಲೆ ವಿವರಿಸಿದರು.

‘ಭಕ್ತಿ, ಆರಾಧನೆ, ಕಥನಾ ಕಲೆ, ಹಾಸ್ಯಮಿಶ್ರಿತ ಶೈಲಿ, ಕಥೆಯೊಳಗೊಂದು ಉಪಕಥೆ, ಹಾಸ್ಯ, ವ್ಯಂಗ್ಯ, ವಿಡಂಬನೆಯು ನಮ್ಮ ಕಲೆಯಲ್ಲಿ ಮೇಳೈಸಿದೆ. ಶಕ್ತಿ ದೇವಿ ಅಂಬಾ ಭವಾನಿ ನಮ್ಮ ಆರಾಧ್ಯ ದೇವಿಯಾಗಿದ್ದು, ಆಕೆಗೆ ಗೊಂದಲ ಬಿಟ್ಟರೆ ಬೇರೇನೂ ಸಲ್ಲದು. ಹೀಗಾಗಿ, ಕಥನ ಹಾಗೂ ಗಾಯನದಲ್ಲಿ ಆಕೆಯ ಮಹಿಮೆಯನ್ನು ಸಾರುವ ಹಾಡುಗಳನ್ನು ಹಾಡುತ್ತೇವೆ’ ಎಂದರು.

ಆಶಯ ನುಡಿಗಳನ್ನಾಡಿದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ, ‘ಜಾನಪದ ಲೋಕವನ್ನು ರಾಮನಗರದಲ್ಲಿ ಸ್ಥಾಪಿಸುವ ಮನಸ್ಸು ಆರಂಭದಲ್ಲಿ ಎಚ್‌.ಎಲ್. ನಾಗೇಗೌಡರಿಗೆ ಇರಲಿಲ್ಲ. ನೆಲಮಂಗಲ ರಸ್ತೆಯಲ್ಲಿ ಮಾಡುವ ಆಲೋಚನೆ ಇತ್ತು. ಆದರೆ, ಅಲ್ಲಿನ ಜಾಗ ಬೇರೆಯವರಿಗೆ ಮಂಜೂರಾಗಿದ್ದರಿಂದ ಕಡೆಗೆ ಗೌಡರ ಮನಸ್ಸು ರಾಮನಗರದತ್ತ ಹೊರಳಿತು’ ಎಂದು ನೆನೆದರು.

ಸುಗತೇಕರ ಅವರ ತಂಡ ಪ್ರಸ್ತುತಪಡಿಸಿದ ಗೊಂದಲ ಗಾಯನ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಜಾನಪದ ಲೋಕದ ಕ್ಯುರೇಟರ್ ಡಾ. ರವಿ ಯು.ಎಂ ಹಾಗೂ ಪ್ರದೀಪ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ರಾಮನಗರದ ಜಾನಪದ ಲೋಕದಲ್ಲಿ  ಭಾನುವಾರ ನಡೆದ ‘ಲೋಕಸಿರಿ’ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗೊಂದಲಿಗ ಕಲಾವಿದ ಹನುಮಂತಪ್ಪ ವೆಂಕಪ್ಪ ಸುಗತೇಕರ ತಂಡ ಗೊಂದಲ ಗಾಯನ ಪ್ರಸ್ತುತಪಡಿಸಿತು
ಜಾನಪದ ಲೋಕವು ರಾಮನಗರ ಜಿಲ್ಲೆಯ ಮುಕುಟವಾಗಿದೆ. ಜಾನಪದ ಕಲಾವಿದರಿಗೆ ಲೋಕದಲ್ಲಿ ವೇದಿಕೆ ಒದಗಿಸುವ ಜೊತೆಗೆ ರಾಜ್ಯ ಸರ್ಕಾರದಿಂದ ಅವರಿಗೆ ಮಾಶಾಸನ ಹೆಚ್ಚಳ ಮಾಡಿಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಪ್ರಯತ್ನ ಮಹತ್ತರವಾದುದು
ಕುಂಬಾಪುರ ವಿ. ಬಾಬು ಸದಸ್ಯ ಕರ್ನಾಟಕ ನಾಟಕ ಅಕಾಡೆಮಿ
ಜಾನಪದ ಲೋಕದಲ್ಲಿ ಎಂಟೂವರೆ ವರ್ಷಗಳಿಂದ ಲೋಕಸಿರಿ ಕಾರ್ಯಕ್ರಮ ನಡೆಯುತ್ತಿದೆ. ಲೋಕಕ್ಕೆ ಬಂದಿರುವ ಬಹುತೇಕ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿ–ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ಜಾನಪದ ಪರಿಷತ್ತು
ಆದಿತ್ಯ ನಂಜರಾಜ್ ಮ್ಯಾನೇಜಿಂಗ್ ಟ್ರಸ್ಟಿ ಕರ್ನಾಟಕ

‘ನೆಲಮೂಲ ಕಲಾವಿದರ ಪೋಷಿಸುವ ಲೋಕ’

‘ತೆರೆಮರೆಯಲ್ಲಿ ಜಾನಪದ ಕಲಾಸೇವೆ ಮಾಡಿಕೊಂಡಿದ್ದ ನಾಡಿನ ಜಾನಪದ ಕಲಾವಿದರನ್ನು ಗುರುತಿಸಿ ಅವರನ್ನು ಹೊರಜಗತ್ತಿಗೆ ಪರಿಚಯಿಸುವ ಕೆಲಸವನ್ನು ಜಾನಪದ ಲೋಕ ಮಾಡುತ್ತಾ ಬಂದಿದೆ. ಎಚ್‌.ಎಲ್. ನಾಗೇಗೌಡರು ಪರಿಷತ್ತು ಹಾಗೂ ಈ ಲೋಕ ಸ್ಥಾಪಿಸದರೆ ಇದ್ದಿದ್ದರೆ ಬಹುತೇಕ ಜಾನಪದ ಕಲಾವಿದರು ಇನ್ನೂ ನೇಪಥ್ಯದಲ್ಲೇ ಉಳಿಯುತ್ತಿದ್ದರು. ಅವರ ಪ್ರಯತ್ನದಿಂದಾಗಿ ನೆಲಮೂಲ ಕಲಾವಿದರಿಗೆ ವೇದಿಕೆ ಜೊತೆಗೆ ಬದುಕು ಸಹ ಸಿಕ್ಕಿದೆ’ ಎಂದು ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮೆಚ್ಚುಗೆ ವ್ಯಕ್ತಪಡಿಸಿದರು.

ಏನಿದು ಗೊಂದಲ ಕಲೆ?

ಕರ್ನಾಟಕದ ವೃತ್ತಿಗಾಯನದಲ್ಲಿ ಗೊಂದಲ ಪ್ರಮುಖವಾದುದು. ಉತ್ತರ ಕರ್ನಾಟಕದಲ್ಲಿ ಕಂಡುಬರುವ ಈ ಬಗೆಯ ಗಾಯನವನ್ನು ಗೊಂದಲಿಗರು ಹಾಡುತ್ತಾ ಬಂದಿದ್ದಾರೆ. ಮುಖ್ಯ ಗಾಯಕ ತನ್ನ ಸೊಂಟಕ್ಕೆ ಕಟ್ಟಿದ ಸಂಬಾಳವನ್ನು (ಢಮಕಿ) ಒಂದು ಕೈಯಲ್ಲಿ ಬಾರಿಸುತ್ತಾ ಮತ್ತೊಂದು ಕೈಲಿ ಕಂಚಿನ ತಾಳ ಮತ್ತು ಕಾಲಲ್ಲಿ ಗೆಜ್ಜೆ ಕಟ್ಟಿ ಹಾಡಿನ ಶೈಲಿಗೆ ತಕ್ಕಂತೆ ನರ್ತಿಸುತ್ತಾ ಗೊಂದಲ ಹಾಕುತ್ತಾನೆ. ಮುಖ್ಯ ಗಾಯಕನಿಗೆ ಸಹ ಗಾಯಕರು ಚೌಡಿಕೆ ನುಡಿಸುತ್ತಾ ದನಿಗೂಡಿಸುತ್ತಾರೆ. ಇವರು ತುಳಜಾಪುರದ ಅಂಬಾ ಭವಾನಿ ಹಾಗೂ ಸವದತ್ತಿ ಯಲ್ಲಮ್ಮನ ಪರಮ ಭಕ್ತರು. ಇವರಿಗೆ ಕಥಾ ಗಾಯನ ಮಾಡಿಸುವುದರಿಂದ ಸಕಲವೂ ಶುಭವಾಗಲಿದೆ ಎಂಬ ನಂಬಿಕೆ ಇದೆ. ಜಾನಪದ ಕಥೆಗಳನ್ನು ಹಾಗೂ ದೇವಿಯ ಮಹಿಮೆಯನ್ನು ಗಾಯನ ರೂಪದಲ್ಲಿ ಸ್ವಾರಸ್ಯಕರವಾಗಿ ಪ್ರಸ್ತುತಪಡಿಸುವುದು ಗೊಂದಲಿಗರ ವಿಶೇಷ. ಸಾಮಾನ್ಯವಾಗಿ ಯುಗಾದಿ ನವರಾತ್ರಿ ಜಾತ್ರೆ ಉತ್ಸವ ಸುಗ್ಗಿಯಲ್ಲಿ ಗೊಂದಲ ಹಾಡುವುದು ರೂಢಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.