ಹಾರೋಹಳ್ಳಿ (ರಾಮನಗರ): ಇಲ್ಲಿನ ತಹಶೀಲ್ದಾರ್ ವಿಜಿಯಣ್ಣ ಬರೋಬ್ಬರಿ ಒಂಬತ್ತು ಮನೆಗಳ ಒಡೆಯರಾಗಿದ್ದು, ₹3.56 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಗುರುವಾರ ಏಕಕಾಲದಲ್ಲಿ ವಿಜಿಯಣ್ಣ ಅವರ ಮನೆ, ಕಚೇರಿ ಸೇರಿದಂತೆ ಆರು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಜಾಲಾಡಿದಾಗ ಪತ್ತೆಯಾದ ಆಸ್ತಿ ವಿವರಗಳಿವು.
ವಿಜಿಯಣ್ಣ ಅವರ ಮನೆಯಲ್ಲಿ ₹2.42 ಲಕ್ಷ ನಗದು, ₹22.57 ಲಕ್ಷ ಮೌಲ್ಯದ ಚಿನ್ನಾಭರಣ, ₹43.15 ಲಕ್ಷ ಮೌಲ್ಯದ ವಾಹನಗಳು ಹಾಗೂ ₹34 ಲಕ್ಷ ಮೌಲ್ಯದ ಗೃಹೋಪಯೋಗಿ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ.
ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಒಂಬತ್ತು ಮನೆಗಳ ಜೊತೆಗೆ 13 ಎಕರೆ ಕೃಷಿಭೂಮಿ ಹೊಂದಿರುವುದು ಗೊತ್ತಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಲೋಕಾಯುಕ್ತ ಎಸ್‌ಪಿ ನೇತೃತ್ವದ ಅಧಿಕಾರಿಗಳ ತಂಡ ಬೆಳಗ್ಗೆಯೇ ಪಟ್ಟಣದಲ್ಲಿರುವ ವಿಜಿಯಣ್ಣ ಅವರ ಬಾಡಿಗೆ ಮನೆ, ಕಚೇರಿ ಹಾಗೂ ಬೇರೆಡೆ ಇರುವ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತು.
ದಾಳಿಯಲ್ಲಿ ವಿಜಿಯಣ್ಣ ಅವರು ಆದಾಯ ಮೀರಿ ₹2.45 ಕೋಟಿ ಆಸ್ತಿಯನ್ನು ಅಕ್ರಮವಾಗಿ ಹೊಂದಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ಚಿಂತಾಮಣಿ ವರದಿ: ಹಾರೋಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ವಿಜಿಯಣ್ಣ ಅವರಿಗೆ ಸೇರಿದ ಚಿಂತಾಮಣಿ-ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಯಶವಂತಪುರದ ಫಾರ್ಮ್ ಹೌಸ್‌ನಲ್ಲಿಯೂ ಲೋಕಾಯುಕ್ತ ಪೊಲೀಸರು ದಾಖಲೆಗಳಿಗಾಗಿ ಜಾಲಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.