ರಾಮನಗರ/ಕನಕಪುರ: ಭ್ರಷ್ಟಾಚಾರ ಆರೋಪ, ಸಕಾಲದಲ್ಲಿ ಕೆಲಸ–ಕಾರ್ಯಗಳನ್ನು ಮಾಡದೆ ವಿಳಂಬ ಮಾಡುವುದು ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಜಿಲ್ಲೆಯ ಐದೂ ತಾಲ್ಲೂಕುಗಳ ತಾಲ್ಲೂಕು ಕಚೇರಿಗಳ (ಮಿನಿ ವಿಧಾನಸೌಧ) ಮೇಲೆ ಬುಧವಾರ ಏಕಕಾಲಕ್ಕೆ ಅನಿರೀಕ್ಷಿತವಾಗಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಸ್ನೇಹ ಪಿ.ವಿ ಅವರ ಮಾರ್ಗದರ್ಶನದಲ್ಲಿ ಐದು ಕಚೇರಿಗಳ ಮೇಲೆ ಅಧಿಕಾರಿಗಳ ತಂಡಗಳು ಬೆಳಿಗ್ಗೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದವು. ದಿನವಿಡೀ ವಿವಿಧ ಕಡತಗಳ ಪರಿಶೀಲನೆ, ಕಚೇರಿಯಲ್ಲಿರುವ ಸೌಲಭ್ಯಗಳು, ಮೂಲಸೌಕರ್ಯ ವ್ಯವಸ್ಥೆ ಸೇರಿದಂತೆ ಸಕಾಲದಲ್ಲಿ ಸೇವೆ ಒದಗಿಸಲಾಗುತ್ತಿದೆಯೇ ಎಂಬುದರ ಕುರಿತು ಪೊಲೀಸರ ತಂಡವು ತಹಶೀಲ್ದಾರ್‌ಗಳು ಸೇರಿದಂತೆ ಇತರ ಅಧಿಕಾರಿಗಳನ್ನು ವಿಚಾರಣೆ ನಡೆಸಿತು.
ಡಿವೈಎಸ್ಪಿಗಳಾದ ಶಿವಪ್ರಸಾದ್ ನೇತೃತ್ವದ ತಂಡ ಕನಕಪುರ ತಾಲ್ಲೂಕು ಕಚೇರಿ, ರಾಜೇಶ್ ಕೆ.ಆರ್ ತಂಡ ಚನ್ನಪಟ್ಟಣ ಕಚೇರಿ, ಇನ್‌ಸ್ಪೆಕ್ಟರ್‌ಗಳಾದ ಸಂದೀಪ್ ಕುಮಾರ್ ನೇತೃತ್ವದ ತಂಡ ಹಾರೋಹಳ್ಳಿ, ಹನುಮಂತಕುಮಾರ್ ತಂಡ ರಾಮನಗರ ಹಾಗೂ ಚಾಮರಾಜನಗರದ ಇನ್‌ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದ ತಂಡ ಮಾಗಡಿ ತಾಲ್ಲೂಕು ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿತು.
ಏನೇನು ಪರಿಶೀಲನೆ?: ಬೆಳಿಗ್ಗೆಯಿಂದ ಸಂಜೆವರೆಗೆ ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಯಿತು. ಕಚೇರಿ ಹಾಜರಾತಿ ಪುಸ್ತಕ, ನಗದು ಘೋಷಣಾ ವಹಿ, ಚಲನ-ವಲನಾ ವಹಿ, ಸಕಾಲ ಸೇವೆ, ಆರ್‌ಟಿಐ ಅರ್ಜಿಗಳ ವಿಲೇವಾರಿ, ನೋಂದಣಿಯ ದಾಖಲೆಗಳು, ಕಚೇರಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಫಲಕ, ಸಲಹಾ ಪೆಟ್ಟಿಗೆ, ಸರ್ವರ್ ಸಮಸ್ಯೆ, ಕಚೇರಿಯಲ್ಲಿ ಮೂಲಸೌಕರ್ಯಗಳು, ಕೆಲಸ ಮಾಡಿಸಿ ಕೊಡುವುದಾಗಿ ಅಧಿಕಾರಿಗಳ ಬಳಿಗೆ ಬರುವ ಮಧ್ಯವರ್ತಿಗಳ ಹಾವಳಿ ಕುರಿತು ದಾಳಿ ವೇಳೆ ಪರಿಶೀಲನೆ ನಡೆಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ಕನಕಪುರದ ಕಚೇರಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಮಾಹಿತಿ ಫಲಕ ಅಳವಡಿಸಿರುವುದನ್ನು ಕಂಡ ಡಿವೈಎಸ್ಪಿ ಶಿವಪ್ರಸಾದ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ಮುಗಿಸುವ ಹೊತ್ತಿಗೆ ಅಧಿಕಾರಿಗಳು ಫಲಕ ತಂದು ಅಳವಡಿಸಿದರು. ಚನ್ನಪಟ್ಟಣ ಮತ್ತು ರಾಮನಗರ ಕಚೇರಿಯಲ್ಲಿ ಸ್ವಚ್ಛತೆ ಕೊರತೆ, ಕೆಲ ದಾಸ್ತಾವೇಜುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಕಂಡುಬಂತು. ಹಲವು ನೌಕರರು ತಮ್ಮ ಐ.ಡಿ ಕಾರ್ಡ್ ಧರಿಸದೆ ಕೆಲಸ ಮಾಡುತ್ತಿದ್ದರು. ಬಹುತೇಕ ಕಡೆ ಇರುವ ಶೌಚಾಲಯಗಳು ಗಬ್ಬು ನಾರುತ್ತಿದ್ದವು ಎಂದು ಪೊಲೀಸರು ಹೇಳಿದರು.
ವಾಸ್ತವದ ಅರಿವು: ‘ಸರ್ಕಾರಿ ಕಚೇರಿಗಳಲ್ಲಿನ ನೈಜ ಪರಿಸ್ಥಿತಿ ಗೊತ್ತಾಗುವುದು ನಾವು ಈ ರೀತಿ ಅನಿರೀಕ್ಷಿತವಾಗಿ ಭೇಟಿ ನೀಡಿದಾಗಲೇ. ಅದೇ ಕಾರಣಕ್ಕೆ ಇಲಾಖೆವಾರು ಕೇಳಿ ಬರುವ ದೂರುಗಳನ್ನು ಆಧರಿಸಿ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸುತ್ತಿದ್ದೇವೆ. ಈಗಾಗಲೇ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಕಳೆದ ವಾರ ದಾಳಿ ನಡೆಸಿದ್ದವು. ಇದೀಗ, ತಾಲ್ಲೂಕು ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದೆವು. ಈ ಕುರಿತು ವರದಿ ತಯಾರಿಸಿ ಲೋಕಾಯುಕ್ತರಿಗೆ ಸಲ್ಲಿಸಲಿದ್ದೇವೆ’ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಸ್ನೇಹ ಪಿ.ವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡುಬಂದರೆ ಸಕಾಲದಲ್ಲಿ ಕೆಲಸವಾಗದಿದ್ದರೆ ಸೇರಿದಂತೆ ಏನೇ ದೂರುಗಳಿದ್ದರೂ ಸಾರ್ವಜನಿಕರು ಲೋಕಾಯುಕ್ತ ಗಮನಕ್ಕೆ ತರಬೇಕು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕುಸ್ನೇಹ ಪಿ.ವಿ. ಪೊಲೀಸ್ ಅಧೀಕ್ಷಕಿ ಲೋಕಾಯುಕ್ತ ಬೆಂಗಳೂರು ದಕ್ಷಿಣ ಜಿಲ್ಲೆ
ಹಾರೋಹಳ್ಳಿ ಕಚೇರಿಯಲ್ಲಿ ಅವ್ಯವಸ್ಥೆ
ಪಟ್ಟಣ ಪಂಚಾಯಿತಿ ಕಟ್ಟಡದಲ್ಲೇ ಇರುವ ಹಾರೋಹಳ್ಳಿ ತಾಲ್ಲೂಕು ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಇನ್ನೂ ಪೂರ್ಣಪ್ರಮಾಣದಲ್ಲಿ ಇಲ್ಲಿ ಕಚೇರಿ ಸ್ಥಾಪನೆಯಾಗಿಲ್ಲ. ಹಲವು ಸೇವೆಗಳು ಇನ್ನೂ ಶುರುವಾಗಿಲ್ಲ. ಸಾರ್ವಜನಿಕರು ಕೆಲ ಸೇವೆಗಳಿಗೆ ಈಗಲೂ ಕನಕಪುರಕ್ಕೆ ಹೋಗಬೇಕಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಇದೆ. ಇಲ್ಲಿ ಮೂತ್ರಾಲಯ ಮತ್ತು ಶೌಚಾಲಯದ ವ್ಯವಸ್ಥೆಯೇ ಇಲ್ಲ. ಜನರ ಕೆಲಸಗಳು ಸಕಾಲದಲ್ಲಿ ನಡೆಯುತ್ತಿಲ್ಲ. ಜಾಗದ ಕೊರತೆ ಕಾರಣಕ್ಕಾಗಿ ಕೆಲ ಸೇವೆಗಳ ಆರಂಭಕ್ಕೆ ತೊಡಕಿರುವುದು ಕಂಡುಬಂತು. ಸಿಬ್ಬಂದಿ ಕೊರತೆಯಿಂದಾಗಿ ತಹಶೀಲ್ದಾರ್ ವಾಹನ ಚಾಲಕನಿಗೂ ಬೇರೆ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.