ಚನ್ನಪಟ್ಟಣ: ತಾಲ್ಲೂಕಿನ ಕೂಡ್ಲೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀರಾಮ ದೇವಾಲಯ ಶಿಥಿಲಾವಸ್ಥೆ ತಲುಪಿದ್ದು, ಅದನ್ನು ರಕ್ಷಿಸಲು ಹಾಗೂ ಅಭಿವೃದ್ಧಿಪಡಿಸಲು ವಿಫಲರಾಗಿರುವ ಸಂಬಂಧಿಸಿದ ಮೂವರು ಅಧಿಕಾರಿಗಳ ವಿರುದ್ಧ ರಾಜ್ಯ ಉಪ ಲೋಕಾಯುಕ್ತ ಕೆ.ಎನ್ ಫಣೀಂದ್ರ ಅವರು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.
ಸಂರಕ್ಷಿತ ಸ್ಮಾರಕವಾಗಿರುವ ದೇಗುಲವನ್ನು ಕಾಪಾಡುವುದನ್ನು ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸೇರಿದಂತೆ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿ ಪುರಾತತ್ವ ಇಲಾಖೆಯ ಎಇಇ ತಾರಕೇಶ್, ನೀರಾವರಿ ಇಲಾಖೆಯ ಇಇ ಮೋಹನ್, ಮುಜರಾಯಿ ಇಲಾಖೆಯ ತಹಶೀಲ್ದಾರ್ ಮೊಹಮ್ಮದ್ ಜೀಶನ್ ಅಲಿ ಖಾನ್ ವಿರುದ್ಧ ಸುಮೊಟೋ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಕೆರೆಗಳ ಒತ್ತುವರಿ ಬಗ್ಗೆ ದೂರುಗಳು ಬಂದ ಹಿನ್ನೆಲೆ ಈಚೆಗೆ ಕೆರೆಗಳ ವೀಕ್ಷಣೆಗೆ ತಾಲ್ಲೂಕಿಗೆ ಆಗಮಿಸಿದ್ದ ಅವರು, ತಾಲ್ಲೂಕಿನ ಕೂಡ್ಲೂರು ಶ್ರೀರಾಮನ ದೇವಾಲಯಕ್ಕೆ ಭೇಟಿ ನೀಡಿದ್ದರು. ಭೇಟಿಯ ವೇಳೆ ದೇಗುಲ ಶಿಥಿಲಾವಸ್ಥೆಯನ್ನು ಕಂಡು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಈ ಸಂಬಂಧ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅವರ ನಿಷ್ಕ್ರಿಯತೆಯ ಬಗ್ಗೆ ವಿವರಣೆ ಕೋರಿದ್ದಾರೆ.
ಕೂಡ್ಲೂರು ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ರಾಮದೇವರ ದೇವಸ್ಥಾನವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಗಂಗರಿಂದ ನಿರ್ಮಾಣವಾಗಿದ್ದ ಈ ದೇವಾಲಯ ಚೋಳ ರಾಜರಾದ ರಾಜರಾಜ ಚೋಳ ಮತ್ತು ರಾಜೇಂದ್ರ ಚೋಳನ ಕಾಲದಲ್ಲಿ ದೇವಸ್ಥಾನ ಅಭಿವೃದ್ಧಿಪಡಿಸಲಾಗಿತ್ತು. ಈ ದೇಗುಲವನ್ನು 1987ರಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. ಆದರೆ ಇಂತಹ ಪುರಾತನ ದೇಗುಲವನ್ನು ಕಾಪಾಡಿಕೊಳ್ಳಲು ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.