ADVERTISEMENT

ಜಿಲ್ಲಾ ಮಟ್ಟದಲ್ಲಿ ಜನಪದ ಕಲೆಗಳ ವಸತಿ ಶಾಲೆ ತೆರೆಯಲು ಸಲಹೆ

ಜಾನಪದ ಲೋಕೋತ್ಸವ ಸಮಾರಂಭದಲ್ಲಿ ಪ್ರೊ.ಡಿ.ಬಿ. ನಾಯಕ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 19:57 IST
Last Updated 16 ಫೆಬ್ರುವರಿ 2019, 19:57 IST
ಲೋಕೋತ್ಸವವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಿ.ಬಿ. ನಾಯಕ್‌ ಉದ್ಘಾಟಿಸಿದರು
ಲೋಕೋತ್ಸವವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಿ.ಬಿ. ನಾಯಕ್‌ ಉದ್ಘಾಟಿಸಿದರು   

ರಾಮನಗರ : ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ವಸತಿಯುತ ಜನಪದ ಕಲೆಗಳ ತರಬೇತಿ ಶಾಲೆಗಳನ್ನು ತೆರೆಯಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಿ.ಬಿ. ನಾಯಕ್‌ ಹೇಳಿದರು.
ಇಲ್ಲಿನ ಜಾನಪದ ಲೋಕದಲ್ಲಿ ಶನಿವಾರ ನಡೆದ ಪ್ರವಾಸಿ ಜಾನಪದ ಲೋಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ, ಪ್ರೌಢಶಾಲೆಗಳ ಪಠ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಪದಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರಿಸಬೇಕು. ಪದವಿ ಹಂತದಲ್ಲಿ ಜನಪದವನ್ನು ಐಚ್ಛಿಕ ವಿಷಯವನ್ನಾಗಿ ಪರಿಗಣಿಸಬೇಕು ಎಂದರು.

ಇಂದಿನ ಸಂದರ್ಭದಲ್ಲಿ ಜನಪದ ಕಲೆಗಳು ಸೊರಗಿ ಸುಣ್ಣವಾಗುತ್ತಿವೆ. ಕಾಲ ಬದಲಾದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗುತ್ತಿದೆ. ಜನರ ಜೀವನ ವಿಧಾನವೂ ತ್ವರಿತಗತಿಯಲ್ಲಿ ಬದಲಾಗುತ್ತಿದೆ. ಆಧುನಿಕ ಶಿಕ್ಷಣ, ಸಿನಿಮಾ, ದೂರದರ್ಶನ, ಮೊಬೈಲ್ ಎಲ್ಲಾ ಕ್ಷೇತ್ರಗಳ ಮೇಲೂ ಪ್ರವಾಹಕ್ಕಿಂತಲೂ ಹೆಚ್ಚಾಗಿ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ADVERTISEMENT

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ ಮಾತನಾಡಿ ಜನಪದ ಕಲೆಗಳು ಎಂದಿಗೂ ನಾಶವಾಗು
ವುದಿಲ್ಲ. ಮೊದಲು ಕೇವಲ ಒಂದೆರೆಡು ತಂಡಗಳು ಇರುತ್ತಿದ್ದವು, ಇಂದು ನೂರಾರು ಜನಪದ ಕಲೆಗಳ ತಂಡಗಳಿವೆ ಎಂದು ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ ಗೌಡ ಮಾತನಾಡಿ ಶಿಕ್ಷಣ ಎಂದರೆ ಅರಿವು, ತಿಳವಳಿಕೆ, ಕೌಶಲ ಪಡೆಯುವುದು ಎಂದರ್ಥ. ಆದರೆ ಇಂದು ಶಿಕ್ಷಣ ಪಡೆಯುವುದು ಉದ್ಯೋಗ ಪಡೆದುಕೊಳ್ಳಲು ಎಂಬಂತಾಗಿದೆ. ಈ ಮನಸ್ಥಿತಿ ಜನರಲ್ಲಿ ಹೋದರೆ ಜನಪದ ಕಲೆಗಳು ಉಳಿಯುತ್ತವೆ ಎಂದು ತಿಳಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಚಂದ್ರಶೇಖರ್, ಗಾಯಕ ಬಾನಂದೂರು ಕೆಂಪಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಮೆನೇಜಿಂಗ್ ಟ್ರಸ್ಟಿ ಆದಿತ್ಯನಂಜರಾಜ್ ಇದ್ದರು.

ನನ್ನೂರು ನಾಟಕ ಪ್ರದರ್ಶನ : ಜಾನಪದ ಲೋಕದ ಜಾನಪದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಚ್.ಎಲ್. ನಾಗೇಗೌಡರ ಕೃತಿಯನ್ನು ಆಧರಿಸಿದ ‘ನನ್ನೂರು’ ನಾಟಕವನ್ನು ಪ್ರದರ್ಶಿಸಿದರು. ಬೈರ್ನಳ್ಳಿ ಶಿವರಾಂ ನಿರ್ದೇಶಿಸಿದರು.

ಸಮಾರೋಪ ಸಮಾರಂಭ : ಇಲ್ಲಿನ ಜಾನಪದ ಲೋಕದ ಸರಸ್ವತಿ ಮಂದಿರದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಸಂಶೋಧನಾ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಶಿಬಿರದ ನಿರ್ದೇಶಕರಾದ ಡಾ.ಹಿ.ಶಿ ರಾಮಚಂದ್ರೇಗೌಡ, ಡಾ.ಆರ್. ಚೇತನ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ. ನಾಯಕ್‌ ಇದ್ದರು.

ಕರಕುಶಲ ಮೇಳ : ಕರಕುಶಲ ಮೇಳದ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟಕ್ಕೆ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ. ಟಾಕಪ್ಪ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.