ADVERTISEMENT

‘ಮಲೇರಿಯಾ ನಿಯಂತ್ರಣ ಎಲ್ಲರ ಕರ್ತವ್ಯ’

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 14:04 IST
Last Updated 20 ಜೂನ್ 2019, 14:04 IST
ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ರೇಣುಕಾಪ್ರಸಾದ್ ಉದ್ಘಾಟಿಸಿದರು
ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ರೇಣುಕಾಪ್ರಸಾದ್ ಉದ್ಘಾಟಿಸಿದರು   

ರಾಮನಗರ: ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ನಂಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇಣುಕಾಪ್ರಸಾದ್ ಹೇಳಿದರು.

ಇಲ್ಲಿನ ಲಕ್ಕೋಜನಹಳ್ಳಿಯ ಪ್ರೌಢಶಾಲೆಯಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಲೇರಿಯಾ ಒಂದು ಸಾಂಕ್ರಾಮಿಕ ರೋಗವಾಗಿದೆ. ಇದರ ನಿಯಂತ್ರಣದಿಂದ ಆರೋಗ್ಯವನ್ನು ಕಾಪಾಡುವುದರ ಜತೆಗೆ ದೇಶದ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಆದ್ದರಿಂದ ಜನರು ಮಲೇರಿಯಾ ನಿಯಂತ್ರಣ ಮಾಡಲು ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಪ್ರಯೋಗ ಶಾಲಾ ಶಾಸ್ತ್ರಜ್ಞ ಡಿ.ಪುಟ್ಟಸ್ವಾಮಿಗೌಡ ಮಾತನಾಡಿ, ಮಲೇರಿಯಾ ಒಂದು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿದೆ. ಜ್ವರ, ವಿಪರೀತ ಚಳಿ, ಮೈಬೆವರುವಿಕೆ ನಿಶ್ಯಕ್ತಿ, ರಕ್ತಹೀನತೆ ಇವು ಮಲೇರಿಯಾ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಯಾವುದೇ ವ್ಯಕ್ತಿಗೆ ಜ್ವರ ಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆಯನ್ನು ಪಡೆಯಬೇಕು ಎಂದು ತಿಳಿಸಿದರು.

ADVERTISEMENT

ಸೊಳ್ಳೆಗಳು ನಿಂತ ನೀರಿನಲ್ಲಿ ವಂಶಾಭಿವೃದ್ಧಿ ಮಾಡುವುದರಿಂದ ಒಂದು ವಾರಕ್ಕೂ ಹೆಚ್ಚು ಕಾಲ ನೀರು ನಿಲ್ಲತಕ್ಕ ಟೈರ್, ಪ್ಲಾಸ್ಟಿಕ್ ಲೋಟ, ತಟ್ಟೆ, ಬಕೆಟ್, ಹೊಡೆದ ಮಡಿಕೆ, ತೆಂಗಿನ ಚಿಪ್ಪು ಇತರೆ ಅನುಪಯುಕ್ತ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಜನರು ಸೊಳ್ಳೆಯ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಸ್ವಯಂ ರಕ್ಷಣಾ ವಿಧಾನಗಳು, ರಾಸಾಯನಿಕ ನಿಯಂತ್ರಣ ಕ್ರಮಗಳು, ಜೈವಿಕ ನಿಯಂತ್ರಣ ಕ್ರಮಗಳು ಮತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡಿದಾಗ ಮಾತ್ರ ಸದರಿ ಈ ಮಾರಣಾಂತಿಕ ರೋಗದಿಂದ ದೂರವಿರಬಹುದಾಗಿದೆ ಎಂದು ತಿಳಿಸಿದರು.

ಶಾಲೆಯ ಮುಖ್ಯಶಿಕ್ಷಕಿ ಪ್ರೇಮಲತಾ ಮಾತನಾಡಿ, ಶಾಲೆಗಳಲ್ಲಿ ಇಂತಹ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು ನಡೆದರೆ ರೋಗ ಮುಕ್ತ ಸಮಾಜ ಮತ್ತು ದೇಶವನ್ನು ಕಟ್ಟಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಲೇರಿಯಾ ರೋಗ ನಿರ್ಮೂಲನೆಯಲ್ಲಿ ತಮ್ಮನ್ನು ತಾವು ಸ್ವಪ್ರೇರಣೆಯಿಂದ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಸಹಾಯಕ ರಾಜೇಂದ್ರ, ಶಿಕ್ಷಕರಾದ ರಾಜಶೇಖರ್, ರಾಧಾಮಣಿ, ಮುನಿಯಪ್ಪ, ವಿಜಯ್‍ ಕುಮಾರ್, ಅನುರಾಧ ಬಿ. ತೋಡ್ಕರ್, ಯೋಗಿತಾ, ಅರುಣ್‍ ಕುಮಾರ್, ಚೂಡೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.