ಚನ್ನಪಟ್ಟಣ: ತಾಲ್ಲೂಕಿನ ಮಳೂರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಸೋಮವಾರ ಅಪಹರಿಸಲು ಯತ್ನಿಸಿ ವಿಫಲವಾದ ಐವರು ದುಷ್ಕರ್ಮಿಗಳ ತಂಡವೊಂದು, ಕಡೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದ ಜೆಡಿಎಸ್ ಬೆಂಬಲಿತ ಗ್ರಾ.ಪಂ. ಸದಸ್ಯ ವೆಂಕಟೇಶ್ (52) ಚಾಕು ಇರಿತಕ್ಕೆ ಒಳಗಾದವರು. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಬಂದು ಕೃತ್ಯ: ವೆಂಕಟೇಶ್ ಬೆಳಿಗ್ಗೆ ತಮ್ಮ ಮಕ್ಕಳನ್ನು ಬೈರಾಪಟ್ಟಣದಲ್ಲಿರುವ ಶಾಲೆಗೆ ಬೈಕ್‌ನಲ್ಲಿ ಬಿಟ್ಟು ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವೆಂಕಟೇಶ್ ಅವರನ್ನು ಹಿಡಿದು ಕಾರಿಗೆ ತುಂಬಿ ಅಪಹರಿಸಲು ಮುಂದಾದರು.
ಪ್ರತಿರೋಧ ತೋರಿದ ವೆಂಕಟೇಶ್, ನೆರವಿಗಾಗಿ ಜೋರಾಗಿ ಕೂಗಿಕೊಂಡರು. ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಕಾರಿಗೆ ಬಲವಂತವಾಗಿ ಹತ್ತಿಸಲು ಯತ್ನಿಸುತ್ತಿರುವುದನ್ನು ಗಮನಿಸಿದ ರಸ್ತೆಯ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದರು.
ಸ್ಥಳೀಯರ ಕೈಗೆ ಸಿಕ್ಕಿ ಹಾಕಿಕೊಂಡರೆ ತಮಗೆ ಉಳಿಗಾಲವಿಲ್ಲ ಎಂದು ಭಯಗೊಂಡ ದುಷ್ಕರ್ಮಿಗಳು, ಚಾಕುವಿನಿಂದ ವೆಂಕಟೇಶ್ ಅವರನ್ನು ಇರಿದು ಕೊಲೆ ಮಾಡಲು ಯತ್ನಿಸಿದರು. ಜನರು ಸಮೀಪಕ್ಕೆ ಬರುತ್ತಿದ್ದಂತೆ ಕಾರು ಹತ್ತಿ ಪರಾರಿಯಾದರು.
ಹೊಟ್ಟೆ ಮತ್ತು ಕಾಲಿಗೆ ಚಾಕು ಇರಿತದಿಂದ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ವೆಂಕಟೇಶ್ ಅವರನ್ನು ಸ್ಥಳೀಯರು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ವಿಷಯ ತಿಳಿದ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಗೆ ತೆರಳಿ ವೆಂಕಟೇಶ್ ಅವರಿಂದ ಹೇಳಿಕೆ ಪಡೆದರು.
ತಮ್ಮ ಅಪಹರಣ ಮತ್ತು ಕೊಲೆ ಯತ್ನದ ಹಿಂದೆ ಪಂಚಾಯಿತಿ ಅಧ್ಯಕ್ಷ ಚೇತನ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರಾದ ರಾಜೇಶ್, ಕುಮಾರ್ ಮೇಲೆ ಅನುಮಾನವಿದೆ ಎಂದು ವೆಂಕಟೇಶ್ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಿಶ್ವಾಸ ನಿರ್ಣಯ ಪರ ಇದ್ದಿದ್ದಕ್ಕೆ ಕೃತ್ಯ
16 ಸದಸ್ಯರ ಬಲದ ಮಳೂರು ಪಂಚಾಯಿತಿಗೆ 2 ವರ್ಷದ ಹಿಂದೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಚೇತನ್ ಕುಮಾರ್ 9 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಅವಧಿ ಅಧಿಕಾರವಧಿ ಇನ್ನೂ 6 ತಿಂಗಳು ಬಾಕಿ ಇದೆ. ಇದರ ನಡುವೆಯೇ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಕೆಲ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ಚೇತನ್ ಅವರನ್ನು ಕೆಳಕ್ಕಿಳಿಸಲು ಸಿದ್ಧತೆ ನಡೆಸಿದ್ದರು. ಆ. 11ಕ್ಕೆ ಅವಿಶ್ವಾಸ ನಿರ್ಣಯಕ್ಕೆ ದಿನಾಂಕ ಸಹ ನಿಗದಿಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಹಿಂದೆ ಚೇತನ್ ಅವರನ್ನು ಅಧಿಕಾರಕ್ಕೆ ತರಲು ಬೆಂಬಲಿಸಿದವರೇ ಈಗ ಅವಿಶ್ವಾಸ ನಿರ್ಣಯಕ್ಕೆ ಕೈ ಜೋಡಿಸಿ ಅವರ ವಿರುದ್ಧ ನಿಂತಿದ್ದಾರೆ. ಜೆಡಿಎಸ್ ಬೆಂಬಲಿತರಾಗಿರುವ ವೆಂಕಟೇಶ್ ಸಹ ನಿರ್ಣಯ ಬೆಂಬಲಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಅಪಹರಿಸಲು ಯತ್ನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.