ADVERTISEMENT

ಮೇಕೆದಾಟು: ವಿಧಾನಸೌಧ ಪಾದಯಾತ್ರೆಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:15 IST
Last Updated 23 ಸೆಪ್ಟೆಂಬರ್ 2021, 3:15 IST
ಸಭೆಯಲ್ಲಿ ಎಂ.ಮಲ್ಲಪ್ಪ ಮಾತನಾಡಿದರು. ಕುಮಾರಸ್ವಾಮಿ, ಸಂಪತ್‌ಕುಮಾರ್‌, ನಾಗಾನಂದ, ಎಂ.ಡಿ.ಶಿವಕುಮಾರ್‌, ಮಧುಸೂದನ್‌, ಬಿ.ಎಂ.ಪ್ರಕಾಶ್‌, ಮಂಜುನಾಥ್‌, ನಾಗರಾಜು, ಆನಂದರಾವ್‌ ಉಪಸ್ಥಿತರಿದ್ದರು
ಸಭೆಯಲ್ಲಿ ಎಂ.ಮಲ್ಲಪ್ಪ ಮಾತನಾಡಿದರು. ಕುಮಾರಸ್ವಾಮಿ, ಸಂಪತ್‌ಕುಮಾರ್‌, ನಾಗಾನಂದ, ಎಂ.ಡಿ.ಶಿವಕುಮಾರ್‌, ಮಧುಸೂದನ್‌, ಬಿ.ಎಂ.ಪ್ರಕಾಶ್‌, ಮಂಜುನಾಥ್‌, ನಾಗರಾಜು, ಆನಂದರಾವ್‌ ಉಪಸ್ಥಿತರಿದ್ದರು   

ಕನಕಪುರ: ಮೇಕೆದಾಟು ಜಲಾಶಯವನ್ನು ತ್ವರಿತವಾಗಿ ನಿರ್ಮಾಣ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಮೇಕೆದಾಟು ವಿಧಾನಸೌಧವರೆಗಿನ ಬೃಹತ್‌ ಪಾದಯಾತ್ರೆಗೆ ತಾಲ್ಲೂಕಿನ ಮೂವರು ಮಠಾಧೀಶರು ಮೇಕೆದಾಟುವಿನಲ್ಲಿ ಗುರುವಾರ ಬೆಳಿಗ್ಗೆ ಪೂಜೆ ನೆರವೇರಿಸಿ ಚಾಲನೆ ನೀಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಮಲ್ಲಪ್ಪ ತಿಳಿಸಿದರು.

ಬೃಹತ್‌ ಪಾದಯಾತ್ರೆಯ ಹಿನ್ನೆಲೆಯಲ್ಲಿ ಕನಕಪುರದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೆ.23ರಂದು ಮೇಕೆದಾಟುವಿನಲ್ಲಿ ಪ್ರಾರಂಭಗೊಂಡ ಪಾದಯಾತ್ರೆಯು 28ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ಮುಕ್ತಾಯವಾಗಲಿದೆ. 5 ದಿನಗಳ ಕಾಲ ನಿರಂತರವಾಗಿ ಪಾದಯಾತ್ರೆಯ ಮೂಲಕ ಹೋರಾಟಗಾರರು ಬೆಂಗಳೂರನ್ನು ತಲುಪಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೇಕೆದಾಟಿನಿಂದ ಹೊರಟ ಪಾದಯಾತ್ರೆಯು ತಾಲ್ಲೂಕಿನ ಮರಳೇಗವಿ ಮಠದಲ್ಲಿ 23 ರ ರಾತ್ರಿ ಉಳಿದು 24 ರ ಬೆಳಿಗ್ಗೆ ಅಲ್ಲಿ ಉಪಹಾರವನ್ನು ಸೇವಿಸಿ ಅಲ್ಲಿಂದ ಹೊರಟು ಕನಕಪುರವನ್ನು ಪ್ರವೇಶಿಸಿ ಸಾರ್ವಜನಿಕವಾಗಿ ಬಹಿರಂಗ ಸಭೆಯನ್ನು ನಡೆಸಿ ದೇಗುಲಮಠದಲ್ಲಿ ಆಶ್ರಯ ಪಡೆದು 25 ರ ಬೆಳಿಗ್ಗೆ ತಿಂಡಿಯನ್ನು ಮುಗಿಸಿ ಹೊರಡಲಿದೆ. ಕನಕಪುರದಿಂದ ಹೊರಟ ಪಾದಯಾತ್ರೆಯು ಹಾರೋಹಳ್ಳಿಯ ಚನ್ನಮ್ಮ ಕಲ್ಯಾಣ ಮಂಟಪದಲ್ಲಿ ರಾತ್ರಿ ಉಳಿಯಲಿದೆ. 26ರ ಬೆಳಿಗ್ಗೆ ಬೆಳಗಿನ ಫಲಹಾರವನ್ನು ಸೇವಿಸಿ ಪಾದಯಾತ್ರೆಯನ್ನು ಮುಂದುವರಿಸಿ ರಾತ್ರಿ ರವಿಶಂಕರ್‌ ಆಶ್ರಮದ ಮುಂಭಾಗದ
ತ್ರಿಮೂರ್ತಿ ಕಲ್ಯಾಣ ಮಂಟಪದಲ್ಲಿ ಉಳಿಯಲಿದೆ.

ADVERTISEMENT

27ರ ಬೆಳಿಗ್ಗೆ ಅಲ್ಲಿಂದ ಪಾದಯಾತ್ರೆ ಹೊರಟು ಬೆಂಗಳೂರಿನ ಸಾರಕ್ಕಿ ಎಸ್‌.ಎಂ. ಕಲ್ಯಾಣ ಮಂಟಪದಲ್ಲಿ ರಾತ್ರಿ ಉಳಿಯಲಿದ್ದಾರೆ. 28ರ ಬೆಳಿಗ್ಗೆ ಸಾರಕ್ಕಿಯಿಂದ ಪಾದಯಾತ್ರೆ ಹೊರಟ ಪ್ರತಿಭಟನಾಕಾರರು ಫ್ರೀಡಂ ಪಾರ್ಕ್‌ನಲ್ಲಿ ಜಮಾವಣೆಗೊಂಡು ಸಾರ್ವಜನಿಕ ಸಭೆ ನಡೆಸಿ ನಂತರ ವಿಧಾನಸೌಧಕ್ಕೆ ಹೋಗಿ ಒತ್ತಾಯದ ಮನವಿ ಪತ್ರವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದಾಗಿ ತಿಳಿಸಿದರು.

ಮೇಕೆದಾಟು ಹೋರಾಟ ಸಮಿತಿಯಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಜನಪರ ವೇದಿಕೆ, ಎಲ್ಲಾ ರೈತ ಸಂಘಟನೆಗಳು, ಕನ್ನಡಪರ, ದಲಿತಪರ, ಕಾರ್ಮಿಕ ಸಂಘಟನೆಗಳ ಪ್ರತಿಭಟನಾಕಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಜಯಕರ್ನಾಟಕ ಜನಪರ ವೇದಿಕೆ ಮಾದ್ಯಮ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ‘ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆಗಾಗಿ ಮಾಡುತ್ತಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. 6 ಜಿಲ್ಲೆಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಅದಕ್ಕಾಗಿ ತಮ್ಮ ಸಂಘಟನೆ ಬೆಂಬಲ ನೀಡಿದ್ದು ಸಂಘಟನೆಯ ಒಂದು ಸಾವಿರ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ನಾಗಾನಂದ, ಮೇಕೆದಾಟು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸಂಪತ್‌ಕುಮಾರ್‌, ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ಶಿವಕುಮಾರ್‌, ಕಾರ್ಮಿಕ ಘಟಕದ ಅಧ್ಯಕ್ಷ ಮಧುಸೂದನ್‌, ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ್‌, ಬಿ.ಎಂ.ಪ್ರಕಾಶ್‌, ರೈತ ಸಂಘದ ಮುಳ್ಳಳ್ಳಿ ಮಂಜುನಾಥ್‌, ನಾಗರಾಜು, ಆನಂದರಾವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.