ರಾಮನಗರ: ಒಂದೂವರೆ ತಿಂಗಳ ಹಿಂದೆ ದಲಿತ ಮುಖಂಡ ಹಾಗೂ ಜೆಡಿಎಸ್ ಕಾರ್ಯಕರ್ತ ಕೊತ್ತಿಪುರ ಗೋವಿಂದರಾಜು ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ, ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಆಪ್ತ ಅನಿಲ್ ಜೋಗೆಂದರ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಂಗ ಬಂಧನದಲ್ಲಿದ್ದ ಅನಿಲ್‌ನನ್ನು ಐಜೂರು ಠಾಣೆ ಪೊಲೀಸರು ವಿಚಾರಣೆಗಾಗಿ ಸೋಮವಾರ ವಶಕ್ಕೆ ಪಡೆದಿದ್ದಾರೆ.
ಮೇ 3ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜು ನೀಡಿದ ದೂರಿನ ಮೇರೆಗೆ, ಒಟ್ಟು 9 ಮಂದಿ ವಿರುದ್ಧ ಹಲ್ಲೆ ಮತ್ತು ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಅನಿಲ್ ಮೊದಲ ಆರೋಪಿ. ಉಳಿದಂತೆ ಜಯ ಕರ್ನಾಟಕ ರವಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಹಾಗೂ ಇತರ 6 ಮಂದಿ ಆರೋಪಿಗಳಾಗಿದ್ದಾರೆ.
ಪ್ರಕರಣ ದಾಖಲಾದ ಬೆನ್ನಲ್ಲೇ, ದರ್ಶನ್ ಮತ್ತು ಹರ್ಷ ಎಂಬುವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು. ಆದರೆ ಅನಿಲ್ ಮಾತ್ರ ಎಂದಿನಂತೆ ಶಾಸಕರೊಂದಿಗೆ ಓಡಾಡಿಕೊಂಡಿದ್ದ. ಕಾಂಗ್ರೆಸ್ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದ. ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಆತ, ಇದ್ದಕ್ಕಿದ್ದಂತೆ ಕೋರ್ಟ್‌ಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆರೋಪಿಗಳ ಪೈಕಿ, ರವಿ ಮತ್ತು ಚೇತನ್ ಕುಮಾರ್‌ಗೆ ಮಾತ್ರ ದೌರ್ಜನ್ಯ ಕಾಯ್ದೆ ಅನ್ವಯಿಸಲಿದೆ. ಆ ಕುರಿತು ಇಬ್ಬರನ್ನೂ ಕರೆದು ಪ್ರಾಥಮಿಕ ವಿಚಾರಣೆ ನಡೆಸಿದಾಗ, ಅವರ ಪಾತ್ರವಿಲ್ಲರುವುದು ಗೊತ್ತಾಯಿತು. ಘಟನಾ ಸ್ಥಳದಲ್ಲಿ ಅನಿಲ್ ಇಲ್ಲದಿದ್ದರಿಂದ ಬಂಧಿಸಿರಲಿಲ್ಲ. ಆದರೆ, ಆತ ಏಕಾಏಕಿ ಕೋರ್ಟ್‌ಗೆ ಶರಣಾಗಿದ್ದಾನೆ. ಹಾಗಾಗಿ, ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಾಸಕ ಹುಸೇನ್ ಅವರ ಬಲಗೈ ಬಂಟನಂತಿದ್ದ ಅನಿಲ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷನಾಗಿದ್ದ. ಯಾವಾಗಲೂ ಶಾಸಕರ ಬಳಿಯೇ ಇರುತ್ತಿದ್ದ ಆತ, ಕೋರ್ಟ್‌ಗೆ ಶರಣಾಗಿರುವುದು ಪಕ್ಷದೊಳಗೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅನಿಲ್‌ನನ್ನು ಪೊಲೀಸ್ ವಶಕ್ಕೆ ಪಡೆದಿರುವ ಕುರಿತು ಪ್ರತಿಕ್ರಿಯೆ ಪಡೆಯಲು ತನಿಖಾಧಿಕಾರಿ ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್ ಅವರ ಮೊಬೈಲ್ ಸಂಖ್ಯೆಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಪ್ರತಿಕ್ರಿಯಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.