ADVERTISEMENT

ಪ್ಯಾಕೇಜ್ ಘೋಷಣೆ ಕಣ್ಣೊರೆಸುವ ತಂತ್ರ: ಶಾಸಕ ನಿಸರ್ಗ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಮೇ 2020, 17:16 IST
Last Updated 29 ಮೇ 2020, 17:16 IST
ಶಾಸಕ ನಿಸರ್ಗ ನಾರಾಯಣಸ್ವಾಮಿ
ಶಾಸಕ ನಿಸರ್ಗ ನಾರಾಯಣಸ್ವಾಮಿ   

ವಿಜಯಪುರ: ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿ ಪ್ಯಾಕೇಜ್‌ ಕಣ್ಣೊರೆಸುವ ತಂತ್ರವಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ, ರಾಜ್ಯದ ಕಡೆಗೆ ಒಲವು ತೋರಿಸುತ್ತಿಲ್ಲ. ಪ್ರತಿಬಾರಿಯೂ ಅನ್ಯಾಯವಾಗುತ್ತಲೇ ಇದೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಕ್ರೋಡೀಕರಿಸಿ ಪ್ಯಾಕೇಜ್ ಮಾಡಿದ್ದಾರೆ. ಹಿಂದೆ ಮಾಡಿದ್ದ ಘೋಷಣೆ ಮಾಡಿದ್ದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದ್ದು, ಇದನ್ನು ಮರೆಮಾಚಲಿಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ’ ಎಂದರು.

‘ಮುಂದಿನ ದಿನಗಳಲ್ಲಿ ಲಡಾಕ್ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದರೂ ಅಚ್ಚರಿಪಡಬೇಕಿಲ್ಲ. ದೇಶದ ಪ್ರತಿ ಬಡವರ ಖಾತೆಗೆ ₹ 10 ಸಾವಿರ ಜಮಾ ಮಾಡುವ ಮೂಲಕ ಬಡವರ ನೆರವಿಗೆ ಧಾವಿಸಬೇಕು. ಕೇಂದ್ರ ಸರ್ಕಾರ ಘೋಷಣೆ ಮಾಡಿದ ₹ 20 ಲಕ್ಷ ಕೋಟಿ ಪ್ಯಾಕೇಜ್‌ನಿಂದ ಯಾರಿಗೂ ಪ್ರಯೋಜನವಿಲ್ಲ. ₹ 2 ಲಕ್ಷ ಕೋಟಿ ಲೆಕ್ಕ ನೀಡಿ ಅಂಗೈಯಲ್ಲಿ ಅರಮನೆ ತೋರಿಸಲಾಗಿದೆ. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕು. ಕಾರ್ಮಿಕರು ಮತ್ತು ರೈತರ ಕೈಗೆ ನೇರವಾಗಿ ಹಣ ಸಿಕ್ಕರೆ ಮಾತ್ರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುದು ತಜ್ಞರ ಅಭಿಪ್ರಾಯವೂ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿದ ಪ್ಯಾಕೇಜುಗಳು ತಜ್ಞರ ಅಭಿಪ್ರಾಯಕ್ಕೆ ವಿರುದ್ಧವಾಗಿವೆ’ ಎಂದರು.

ADVERTISEMENT

‘ನೇಕಾರ, ದರ್ಜಿ, ಕುಂಬಾರ ಸೇರಿ ಹಲವು ಸಮುದಾಯಕ್ಕೆ ಘೋಷಣೆ ಮಾಡಿದ ₹ 5 ಸಾವಿರ ಪರಿಹಾರ ಯಾವುದಕ್ಕೂ ಸಾಲದು, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಕೆಲವು ಚಾಲಕರು ಕ್ಯಾಬ್‌ ಮಾಲೀಕರ ಬಳಿ ಕೂಲಿಗಾಗಿ ಕೆಲಸ ಮಾಡುತ್ತಿದ್ದಾರೆ ಅಂತಹವರು ವಂಚಿತರಾಗುತ್ತಿದ್ದಾರೆ. ಸರ್ಕಾರ, ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಮಾಹಿತಿಯನ್ನಾಧರಿಸಿ ಪರಿಹಾರಧನ ಕೊಡುತ್ತಾರೆ. ಇದರಿಂದ ಸಾಕಷ್ಟು ಮಂದಿ ಅರ್ಹರು ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.