ADVERTISEMENT

ತೆಂಗು ಬೆಳೆಗೆ ಬಿಳಿನೊಣ ಕೀಟ ಬಾಧೆ

ಗಿಡಗಳ ಎಲೆಗಳನ್ನು ಕಿತ್ತು ತೆಗೆದು ಸುಡಲು ವಿಜ್ಞಾನಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 14:00 IST
Last Updated 11 ಅಕ್ಟೋಬರ್ 2019, 14:00 IST
ಅಧಿಕಾರಿಗಳು ತೆಂಗಿನ ಗರಿಯನ್ನು ವೀಕ್ಷಿಸುತ್ತಿರುವುದು
ಅಧಿಕಾರಿಗಳು ತೆಂಗಿನ ಗರಿಯನ್ನು ವೀಕ್ಷಿಸುತ್ತಿರುವುದು   

ಬಿಡದಿ: ಹೋಬಳಿಯ ಹೋಸೂರು ಗ್ರಾಮದಲ್ಲಿ ಕೆ.ವಿ.ಕೆ ವಿಜ್ಞಾನಿ ಡಾ.ರಾಜೇಂದ್ರ ಪ್ರಸಾದ್ ಅಧಿಕಾರಿಗಳೊಂದಿಗೆ ರೈತ ಕುಮಾರ್ ತೋಟಕ್ಕೆ ಭೇಟಿ ನೀಡಿ ಇತ್ತೀಚಿನ ದಿನಗಳಲ್ಲಿ ತೆಂಗು ಬೆಳೆಗೆ ತಗುಲಿರುವ ಅಮೆರಿಕದ ಕೀಟ ‘ರುಗೋಸ್ ಸುರುಳಿಯಾಕಾರದ ಬಿಳಿನೊಣ’ದ ಕುರಿತು ಜಾಗೃತಿ ಮೂಡಿಸಿದರು.

ಇದನ್ನು 2004 ರಲ್ಲಿ ತೆಂಗಿನ ಮರಗಳಲ್ಲಿ ಮಾರ್ಟಿನ್ ಅವರು ಫ್ಲೋರಿಡಾದ ಬೆಲಿಷ್‌ನಲ್ಲಿ ಪತ್ತೆ ಹಚ್ಚಿದರು. 2016ರ ಸೆಪ್ಟೆಂಬರ್‌ನಲ್ಲಿ ಪ್ರಥಮ ಬಾರಿಗೆ ಭಾರತದಲ್ಲಿ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯಲ್ಲಿ ಕಂಡು ಬಂತು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಪ್ರಮುಖ ಬೆಳೆಯಾದ ತೆಂಗು ಹಾಗೂ ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಕೃಷಿ ಮಾಡುವ ಬಾಳೆ ಮೂಲಕ ಆರ್ಥಿಕ ಸಂಪಾದನೆ ಮಾಡುತ್ತಿರುವ ರೈತರಿಗೆ ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತಿದೆ ಎಂದು ಅವರು ವಿವರಿಸಿದರು.

ತೆಂಗಿನ ತೋಟದಲ್ಲಿ ಈ ಕೀಟದ ಬಾಧೆ ಕಂಡು ಬರುತ್ತದೆ. ಮರಿಗಳು ಹಾಗೂ ಪ್ರೌಢ ಕೀಟಗಳು ಸತತವಾಗಿ ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ಆದ್ದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ; ಮುದುಡುತ್ತವೆ. ಕ್ರಮೇಣವಾಗಿ ಒಣಗಲು ಪ್ರಾರಂಭಿಸುತ್ತವೆ. ಕೀಟಗಳು ಸಿಹಿಯಾದ ಜೇನಿನ ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಬೂದು ಬಣ್ಣದ ಶಿಲೀಂಧ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ ಎಂದರು.

ADVERTISEMENT

ರೈತರು ಕೀಟವನ್ನು ನಿಯಂತ್ರಿಸಲು ಬಾಧೆಗೆ ಒಳಪಟ್ಟ ಗಿಡಗಳ ಎಲೆಗಳನ್ನು ಕಿತ್ತು ತೆಗೆದು ಸುಡಬೇಕು. ಹಳದಿ ಬಣ್ಣದ ಬಲೆಗಳು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್ ಗೆ ಹರಳೆಣ್ಣೆ ಹಚ್ಚಿ ಅಲ್ಲಲ್ಲಿ ತೋಟದಲ್ಲಿ ನೇತು ಹಾಕಬೇಕು. ಹಳದಿ ಬಣ್ಣವು ಕೀಟವನ್ನು ಆಕರ್ಷಿಸುವುದರಿಂದ ಕೀಟಗಳು ಬಲೆಗಳಿಗೆ ಅಂಟಿಕೊಳ್ಳುತ್ತವೆ. ಎನ್ಕಾರ್ಸಿಯಾ ಡಿಸ್ಪರ್ಸಾ ಎಂಬ 2 ಪರಾವಲಂಬಿ ಕೀಟಗಳು ಬಿಳಿನೊಣದ ಮೊಟ್ಟೆಗಳನ್ನು ತಿಂದು ಬದುಕುವುದರಿಂದ ಈ ಕೀಟಗಳ ಸಂತತಿ ಬೆಳೆಯುವಂತೆ ಮಾಡಬೇಕಾಗಿರುವುದರಿಂದ ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು ಎಂದರು.

ನಿಯಂತ್ರಣ ವಿಧಾನ: ಕೀಟಗಳ ಬಾಧೆ ತೀವ್ರವಾಗಿದ್ದು, ಗಿಡಗಳ ಎತ್ತರ ಕಡಿಮೆ ಇದ್ದಲ್ಲಿ ಶೇ 0.5 ಬೇವಿನ ಎಣ್ಣೆಯನ್ನು ಎಲೆಗಳಿಗೆ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.