ಕನಕಪುರ: ನಾಗರಿಕರು ಆಸ್ತಿಗಳಿಗೆ ಇ-ಖಾತೆ ಪಡೆಯಲು ನಗರಸಭೆಗೆ ಅಲೆದಾಡುವುದು ಮತ್ತು ಮಧ್ಯವರ್ತಿ ಹಾವಳಿ ತಪ್ಪಿಸಲು ವಾರ್ಡುಗಳಲ್ಲಿ ನಗರಸಭೆಯಿಂದ ಇ-ಖಾತಾ ಆಂದೋಲನ ನಡೆಸುತ್ತಿದ್ದೇವೆ, ಪ್ರತಿಯೊಬ್ಬರು ಕಡ್ಡಾಯವಾಗಿ ಇ-ಖಾತೆ ಮಾಡಿಸಿಕೊಳ್ಳಬೇಕೆಂದು ನಗರಸಭೆ ಪೌರಾಯುಕ್ತ ಎಂ.ಎಸ್.ಮಹದೇವ್ ತಿಳಿಸಿದರು.
ನಗರಸಭೆಯ ಒಂದನೇ ವಾರ್ಡ್ ರೈಸ್ ಮಿಲ್‌ನಲ್ಲಿ ನಗರಸಭೆ ವತಿಯಿಂದ ಸೋಮವಾರ ನಡೆಸಿದ ಇ-ಖಾತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಶ್ರಯ ಕಮಿಟಿ ಅಧ್ಯಕ್ಷ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಪ್ರತಿಯೊಬ್ಬರ ಆಸ್ತಿಗೂ ಇ-ಖಾತೆಯನ್ನು ತ್ವರಿತವಾಗಿ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದರು. ಅವರ ನಿರ್ದೇಶನದಂತೆ ನಗರಸಭೆ ವತಿಯಿಂದ ಇ-ಖಾತಾ ಆಂದೋಲನ ನಡೆಸುತ್ತಿದ್ದೇವೆ ಎಂದರು.
ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಆಂದೋಲನ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಶೀಘ್ರವಾಗಿ ಇ-ಖಾತೆ ಮಾಡಿಕೊಡಲಾಗುವುದು. ಯಾರು ಇ-ಖಾತೆ ಮಾಡಿಸಿಕೊಳ್ಳುವುದಿಲ್ಲವೋ ಅವರಿಗೆ ನಗರಸಭೆಯ ಸೌಲಭ್ಯ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷೆ ಹೇಮರಾಜ್ ಮಾತನಾಡಿ, ಆಸ್ತಿಗಳಿಗೆ ಇ-ಖಾತೆಗೆ ಸಂಬಂಧಿಸಿದಂತೆ ಪ್ರತಿದಿನ ಆಸ್ತಿ ಮಾಲೀಕರು ನಗರಸಭೆಗೆ ಬರುತ್ತಿದ್ದರು. ಖಾತೆ ಮಾಡುವುದು ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಹಾಗಾಗಿ ಡಿಸಿಎಂ ಜನರನ್ನು ಅಲೆದಾಡಿಸಬೇಡಿ. ಜನರ ಬಳಿಗೆ ನೀವೆ ಹೋಗಿ ಖಾತೆ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದರು. ಅದರಂತೆ ಎಲ್ಲಾ ವಾರ್ಡ್‌ಗಳಲ್ಲೂ ಆಂದೋಲನ ಮಾಡುತ್ತಿದ್ದೇವೆ ಎಂದರು.
ಕಂದಾಯಾಧಿಕಾರಿ ಜ್ಯೋತಿ, ಕಂದಾಯ ನಿರೀಕ್ಷಕ ರಮೇಶ್, ರಾಘಯ್ಯ, ಚಿರಂಜೀವಿ, ಶ್ರೀನಿವಾಸ.ಟಿ, ಶ್ರೀನಿವಾಸ್, ಶಶಿಕಲಾ, ಮನೋಜ್, ಮೋಹನ್, ಪ್ರಕಾಶ್, ರಾಮು, ಬಾಲರಾಜು, ಚೈತ್ರ, ವೆಂಕಟೇಶ್, ಸಹನ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.