ADVERTISEMENT

ಸಾವಿನ ಬಗ್ಗೆ ಸಂಬಂಧಿಕರ ಸಂಶಯ: ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 14:25 IST
Last Updated 12 ಮಾರ್ಚ್ 2019, 14:25 IST
ಜಾಲಮಂಗಲದ ಮಾವಿನ ತೋಟದಲ್ಲಿ ಸಮಾಧಿ ಮಾಡಲಾಗಿದ್ದ ಪ್ರಜ್ವಲ್ ದೇಹವನ್ನು ಮಂಗಳವಾರ ಹೊರತಗೆಯಲಾಯಿತು
ಜಾಲಮಂಗಲದ ಮಾವಿನ ತೋಟದಲ್ಲಿ ಸಮಾಧಿ ಮಾಡಲಾಗಿದ್ದ ಪ್ರಜ್ವಲ್ ದೇಹವನ್ನು ಮಂಗಳವಾರ ಹೊರತಗೆಯಲಾಯಿತು   

ಕೂಟಗಲ್ (ರಾಮನಗರ): ಇಲ್ಲಿನ ಜಾಲಮಂಗಲ ಗ್ರಾಮದ ಮಾವಿನ ತೋಟದಲ್ಲಿ ಸಮಾಧಿ ಮಾಡಲಾಗಿದ್ದ ಪ್ರಜ್ವಲ್ ಮೃತ ದೇಹವನ್ನು ಮಂಗಳವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಪ್ರಜ್ವಲ್‌ ಸಾವಿನ ಬಗ್ಗೆ ಅವರ ಸಂಬಂಧಿಕರು ಸಂಶಯ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಿ ಎಸ್ಪಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಸ್.ಕೆ.ರಾಜು ಹಾಗೂ ಹಾರೋಹಳ್ಳಿ ಪೊಲೀಸ್ ಠಾಣೆ ಸಬ್‍ ಇನ್‌ಸ್ಪೆಕ್ಟರ್ ಧರ್ಮೇಗೌಡ ಸಮ್ಮುಖದಲ್ಲಿ ಶವವನ್ನು ಹೊರಕ್ಕೆ ತೆಗೆದು ವೈದ್ಯರು ಪಂಚನಾಮೆ ನಡೆಸಿದರು.

ಹಿನ್ನೆಲೆ: ಇದೇ 4ರಂದು ಪ್ರಜ್ವಲ್ ಹಾರೋಹಳ್ಳಿಯ ತೋಟದ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದನು. ಶವಸಂಸ್ಕಾರ ವೇಳೆ ಆತನ ಕಿವಿ, ಎದೆಯಭಾಗ, ಬಲಗೈ ತೋಳು, ಎರಡು ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿರುವುದನ್ನು ಕುಟುಂಬದವರು ಗಮನಿಸಿದ್ದರು. ಮೃತ ದೇಹದ ಮೇಲಿನ ಗಾಯಗಳ ಬಗ್ಗೆ ಕೇಳಿದಾಗ ಪ್ರಜ್ವಲ್ ನ ತಾಯಿ ವರಲಕ್ಷ್ಮಿ ಏನನ್ನೂ ಹೇಳದೆ ಮೌನವಾಗಿದ್ದರು. ಆತನ ಸಾವಿನ ಬಗ್ಗೆ ಕೆಲವರು ತದ್ವಿರುದ್ಧ ವಿಚಾರಗಳನ್ನು ಹೇಳಿದರು. ಆದರೂ ಕುಟುಂಬದವರು ಪ್ರಜ್ವಲ್ ನ ಕಳೆಬರವನ್ನು ಜಾಲಮಂಗಲಕ್ಕೆ ತಂದು ಮಾವಿನ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ADVERTISEMENT

ಸಾವಿನ ಬಗ್ಗೆ ತಾಯಿ ವರಲಕ್ಷ್ಮಿ ಏನನ್ನು ಹೇಳದಿದ್ದಾಗ ತಾತ ಗಂಗಯ್ಯ ಮತ್ತು ಕುಟುಂಬದವರಿಗೆ ಅನುಮಾನ ವ್ಯಕ್ತವಾಗಿತ್ತು. ‘ನನ್ನ ಮೊಮ್ಮಗನನ್ನು ಸೊಸೆ ವರಲಕ್ಷ್ಮಿ ಮತ್ತು ಕುಮಾರ್ ಕೊಲೆ ಮಾಡಿರುವ ಸಂಶಯವಿದೆ. ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಿ ಮೊಮ್ಮಗನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದರೆ ಸತ್ಯಾಂಶ ಬಯಲಿಗೆ ಬರಲಿದೆ’ ಎಂದು ಗಂಗಯ್ಯ ಮತ್ತು ಕುಟುಂಬದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಹಾಗೂ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.