ADVERTISEMENT

ನಾಡಪ್ರಭು ಕೆಂಪೇಗೌಡರ ಜಯಂತಿ ಸಂಭ್ರಮ

ಕ್ಲಸ್ಟರ್‌ಗಳಾಗಿ ವಿಂಗಡಿಸಿ ಕೆಂಪೇಗೌಡರ ಕೋಟೆಗಳ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 3:58 IST
Last Updated 8 ಆಗಸ್ಟ್ 2022, 3:58 IST
ಭಾನುವಾರ ಲೋಕಾರ್ಪಣೆಗೊಂಡ ಕೆಂಪೇಗೌಡ ಪ್ರತಿಮೆಗೆ ಮುಖಂಡರು ಪುಷ್ಪಾರ್ಚನೆ ಮಾಡಿದರು
ಭಾನುವಾರ ಲೋಕಾರ್ಪಣೆಗೊಂಡ ಕೆಂಪೇಗೌಡ ಪ್ರತಿಮೆಗೆ ಮುಖಂಡರು ಪುಷ್ಪಾರ್ಚನೆ ಮಾಡಿದರು   

ಬಿಡದಿ:ಬನ್ನಿಕುಪ್ಪೆ ಗ್ರಾ.ಪಂ. ವ್ಯಾಪ್ತಿಯ ಕುರುಬರ ಕರೇನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ 2ನೇ ವರ್ಷದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕೆಂಪೇಗೌಡರ ಜಯಂತಿ ಕೇವಲ ಒಂದೆರೆಡು ಗ್ರಾಮಗಳಿಗೆ ಸೀಮಿತವಾಗದೆ, ಅವರ ಕೆಲಸ ಮತ್ತು ಆದರ್ಶಗಳು ಪ್ರತಿ ಹಳ್ಳಿಗೂ ವ್ಯಾಪಿಸಬೇಕು. ಆಗ ಅವರ ಸೇವೆಗೆ ಗೌರವ ಸಿಗುತ್ತದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಈ ಸಮಾರಂಭದಲ್ಲಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಕೆಂಪೇಗೌಡರ ಪುತ್ಥಳಿ ಅನಾವರಣ ನೆರವೇರಿಸಿ, ಅವರು ಮಾತನಾಡಿದರು.

ADVERTISEMENT

ದೇಶ-ವಿದೇಶದಲ್ಲಿ ಕೆಂಪೇಗೌಡರ ಜಯಂತಿಯನ್ನು ಜೂನ್ 27ರಂದು ಆಚರಿಸಬೇಕೆಂಬ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡು, ಅವರಿಗೆ ಗೌರವ ಸಲ್ಲಿಸುವ ಕೆಲಸನ್ನು ಮಾಡುತ್ತಿದೆ. ಅವರ ಸ್ಮರಣೆ ಒಂದೆರಡು ಗ್ರಾಮಗಳಿಗೆ ಸೀಮಿತವಾಗಬಾರದು. ಬದಲಿಗೆ ಪ್ರತಿಯೊಂದು ಹಳ್ಳಿಗೂ ಅವರ ವಿಚಾರಧಾರೆಗಳು ವ್ಯಾಪಿಸಬೇಕು ಎಂದು ತಿಳಿಸಿದರು.

ಕೆಂಪೇಗೌಡರು ಮಾಗಡಿಯಲ್ಲಿ ನಿರ್ಮಿಸಿದ ಕೋಟೆ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಣ ವ್ಯಯವಾಗಿದೆ. ಮುಂದಿನ ದಿನಗಳಲ್ಲಿ 6 ಕ್ಲಸ್ಟರ್‌ಗಳನ್ನಾಗಿ ವಿಂಗಡಿಸಿ ಕೆಂಪೇಗೌಡರು ನಿರ್ಮಿಸಿದ ಕೋಟೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ. ಈ ಮೂಲಕ ಅವುಗಳನ್ನು ಸಂರಕ್ಷಿಸುವ ಕೆಲಸ ಮಾಡಲಾಗುವುದು. ಅವರು ಕಟ್ಟಿದ ಕೋಟೆ ಕೊತ್ತಲು ಕೆರೆ-ಕಟ್ಟೆಗಳನ್ನು ಉಳಿಸಿಕೊಳ್ಳುವುದನ್ನು ಸವಾಲಾಗಿ ಸ್ವೀಕರಿಸಲಾಗುತ್ತದೆ ಎಂದು ಹೇಳಿದರು.

ಕೆಂಪೇಗೌಡರ ಹೆಸರನ್ನು ಉಳಿಸಲು ಕೆಂಪಾಪುರದಲ್ಲಿ 16 ಎಕರೆ ಪ್ರದೇಶದಲ್ಲಿ ಪಾರಂಪರಿಕ ಕೇಂದ್ರ ತಲೆ ಎತ್ತಲಿದೆ ಎಂದರು.

ಕೆಂಪೇಗೌಡ ಅಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಹೆಚ್.ಎಂ. ಕೃಷ್ಣಮೂರ್ತಿ ಅವರು ಮಾತನಾಡಿ, ಕೆಂಪೇಗೌಡರು ಈ ರಾಜ್ಯ ಕಂಡ ಅಪ್ರತಿಮ ನಾಯಕ. ಅವರ ಆದರ್ಶಗಳು ಇಂದಿನ ಯುವ ಜನರಿಗೆ ಮಾರ್ಗದರ್ಶನವಾಗಲಿದೆ. ಇಂತಹ ಮಹಾನ್ ನಾಯಕರ ನೆನಪಿಗಾಗಿ ಗ್ರಾಮಸ್ಥರು ಒಟ್ಟಾಗಿ ಕೆಂಪೇಗೌಡರ ಜಯಂತಿ ಆಚರಣೆ ಮಾಡುತ್ತಿರುವುದು ವಿಶೇಷ ಎಂದರು.

ಕೆಂಪೇಗೌಡರ ಜೀವನ ಶೈಲಿ, ನಾಡಪ್ರಭು ಅಧಿಕಾರ ಮತ್ತು ಅವರ ಕಾರ್ಯವೈಖರಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅವರು ಕೇವಲ ಕೋಟೆ ಕಟ್ಟುವ ಬದಲು ಬೆಂಗಳೂರು ನಗರದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿದ ದೂರದೃಷ್ಟಿ ಕೆಂಪೇಗೌಡ ಅವರದ್ದು ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.