ADVERTISEMENT

ಕಿರಿದಾದ ರಸ್ತೆ: ಸಂಚಾರಕ್ಕೆ ಕಿರಿಕಿರಿ

ಬರಡನಹಳ್ಳಿ ಕೃಷ್ಣಮೂರ್ತಿ
Published 21 ಸೆಪ್ಟೆಂಬರ್ 2021, 4:58 IST
Last Updated 21 ಸೆಪ್ಟೆಂಬರ್ 2021, 4:58 IST
ಅನಜವಾಡಿಯಿಂದ ಮತ್ತಿಕುಂಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗುಂಡಿ ಬಿದ್ದು ನೀರು ನಿಂತಿರುವುದು
ಅನಜವಾಡಿಯಿಂದ ಮತ್ತಿಕುಂಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗುಂಡಿ ಬಿದ್ದು ನೀರು ನಿಂತಿರುವುದು   

ಕನಕಪುರ:ತಾಲ್ಲೂಕಿನ ರಾಮನಗರ ಮುಖ್ಯರಸ್ತೆಯ ಅನಜವಾಡಿ ಗ್ರಾಮದಿಂದ ಅರ್ಕಾವತಿ ನದಿಯ ಇನ್ನೊಂದು ದಡದಲ್ಲಿರುವ ಮತ್ತಿಕುಂಟೆ, ವೀರೇಗೌಡನದೊಡ್ಡಿ, ಸಿಂಗಸಂದ್ರ, ಮುದುವಾಡಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ನದಿಗೆ ನಿರ್ಮಾಣ ಮಾಡಿರುವ ಕಿರು ಸೇತುವೆಯ ರಸ್ತೆಯು ಹದಗೆಟ್ಟಿದೆ.

ರಸ್ತೆ ಅಭಿವೃದ್ಧಿಪಡಿಸದ ಕಾರಣ ಗುಂಡಿಗಳು ಸೃಷ್ಟಿಯಾಗಿದ್ದು, ಜನರು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಮ ನಗರ ಮುಖ್ಯರಸ್ತೆಯಿಂದ ಮತ್ತಿಕುಂಟೆ, ವೀರೇಗೌಡನದೊಡ್ಡಿ, ಸಿಂಗಸಂದ್ರ ಮೊದಲಾದ ಗ್ರಾಮಗಳಿಗೆ ಹೋಗಬೇಕಾದರೆ ಅನಜವಾಡಿಯಿಂದ ಹೋಗಬೇಕು. ಅರ್ಕಾವತಿ ನದಿ ದಾಟಿದರೆ ಅರ್ಧ ಕಿಲೋಮೀಟರ್‌ನಲ್ಲಿ ಗ್ರಾಮಗಳು ಸಿಗುತ್ತಿವೆ. ಈ ಗ್ರಾಮಗಳಿಗೆ ಅಡ್ಡಲಾಗಿ ನದಿ ಹರಿಯುತ್ತದೆ. ಈ ಮಾರ್ಗದ ಹೊರತಾಗಿ ದೊಡ್ಡಮುದುವಾಡಿ ಗ್ರಾಮದ ಮೂಲಕ ಸಾಗಿದರೆ ಸುಮಾರು 8 ಕಿಲೋಮೀಟರ್‌ ಸಾಗಬೇಕಾಗುತ್ತದೆ.

ಈ ಭಾಗದ ರೈತರು ತಮಗಾಗುತ್ತಿರುವ ತೊಂದರೆ ಬಗ್ಗೆ ಸಂಸದ ಡಿ.ಕೆ. ಸುರೇಶ್‌ ಅವರ ಗಮನಕ್ಕೆ ತಂದರು. ನದಿಗೆ ಅಡ್ಡಲಾಗಿ ಕಿರು ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿದ್ದರು. ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಸಂಸದರು ಸಣ್ಣ ನೀರಾವರಿ ಇಲಾಖೆಯಿಂದ ನಾಲ್ಕು ವರ್ಷಗಳ ಹಿಂದೆ ಸೇತುವೆಯನ್ನು ನಿರ್ಮಾಣ ಮಾಡಿಸಿದ್ದರು.

ADVERTISEMENT

ಆದರೆ, ಸೇತುವೆಯ ಎರಡು ಕಡೆ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸದೆ ಹಾಗೆಯೇ ಬಿಡಲಾಗಿದೆ. ರಸ್ತೆಯಲ್ಲಿ ದೊಡ್ಡದಾದ ಗುಂಡಿಗಳಾಗಿ ಜನರು ಓಡಾಡಲು ಆಗದಂತೆ ಆಗಿದೆ. ಮಳೆಗಾಲದಲ್ಲಿ ದ್ವಿಚಕ್ರವಾಹನಗಳು ಆಯತಪ್ಪಿ ಬೀಳುತ್ತವೆ. ನಾಲ್ಕು ಚಕ್ರದ ವಾಹನಗಳು ಸಂಚರಿಸಲು ಆಗುವುದಿಲ್ಲ. ಸೇತುವೆ ಇದ್ದರೂ ಬಳಕೆ ಮಾಡಲು ಆಗುವುದಿಲ್ಲ ಎನ್ನುವುದು ಮತ್ತಿಕುಂಟೆ ಭಾಗದ ಹಳ್ಳಿಗರ ನೋವು.

‘ಮತ್ತಿಕುಂಟೆ ಮತ್ತು ಅನಜವಾಡಿ ಕಡೆ ಸೇತುವೆ ಪಕ್ಕದಲ್ಲಿ ರಸ್ತೆ ಕಡಿದಾಗಿದೆ. ಇದರಿಂದ ಇಲ್ಲಿ ವಾಹನ ಚಲಾಯಿಸುವುದು ಕಷ್ಟವಾಗುತ್ತದೆ. ಮಳೆ ಬಂದಾಗ ನೀರು ಹರಿದು ರಸ್ತೆ ಕೊರೆಯುತ್ತದೆ. ಮತ್ತೊಂದೆಡೆ ರಸ್ತೆ ಒತ್ತುವರಿಯಾಗಿದ್ದು, ವಾಹನ ಓಡಾಡಲು ಕಷ್ಟವಾಗುತ್ತದೆ. ಹತ್ತಾರು ಹಳ್ಳಿಗೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣ ಮಾಡಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ’ ಎನ್ನುತ್ತಾರೆ ಅಜನವಾಡಿ ರಾಮಚಂದ್ರ.

ಸೇತುವೆಯ ಒಂದು ಭಾಗದ ರಸ್ತೆ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿಗೆ ಸೇರಿದರೆ, ಮತ್ತೊಂದು ಭಾಗದ ರ‍ಸ್ತೆ ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಎರಡು ಪಂಚಾಯಿತಿಯವರು ಸಹಮತದಿಂದ ಎರಡೂ ಕಡೆ ರ‍ಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಈ ಸೇತುವೆಯಿಂದ ಹತ್ತಾರು ಹಳ್ಳಿಗೆ ಅನುಕೂಲವಾಗುತ್ತದೆ.

ಬಿಡದಿ, ಹಾರೋಹಳ್ಳಿ, ದಯಾನಂದ ಸಾಗರ ಆಸ್ಪತ್ರೆ, ಜೈನ್‌ ಸ್ಕೂಲ್‌ ಮತ್ತಿತರ ಕಡೆಗೆ ಹೋಗುವವರು ಈ ಸೇತುವೆ ಮೇಲೆ ಹೋಗುತ್ತಾರೆ. ರಸ್ತೆ ಅಭಿವೃದ್ಧಿಪಡಿಸುವ ವಿಷಯವನ್ನು ಸಂಸದ ಸುರೇಶ್‌ ಅವರ ಗಮನಕ್ಕೆ ತಂದಿದ್ದೇವೆ. ಶೀಘ್ರವೇ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ಮತ್ತಿಕುಂಟೆ ತಮ್ಮಣ್ಣ ಅವರ
ಒತ್ತಾಯ.

ಹತ್ತಾರು ಹಳ್ಳಿಗಳಿಗೆ ಅನುಕೂಲವಾಗುವಂತೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ರಸ್ತೆ ಸಮಸ್ಯೆಯಿಂದ ಸೇತುವೆ ಬಳಕೆಯ ಪ್ರಯೋಜನ ಇಲ್ಲದಂತಾಗಿದೆ. ಗ್ರಾಮ ಪಂಚಾಯಿತಿ, ಶಾಸಕರು, ಸಂಸದರು ಈ ಬಗ್ಗೆ ಗಮನಹರಿಸಿ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಬೇಕು. ಸೇತುವೆ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.