
ರಾಮನಗರ: ‘ನಾನೀಗ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ರಾಜ್ಯದಾದ್ಯಂತ ಓಡಾಡಿ ಪಕ್ಷ ಸಂಘಟಿಸಬೇಕಿದೆ. ಆದರೆ, ನಾನು ಎಲ್ಲೇ ಇದ್ದರೂ, ಮನಸ್ಸು ಮಾತ್ರ ರಾಮನಗರದಲ್ಲೇ ಇರಲಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಜನ್ಮದಿನದ ಪ್ರಯುಕ್ತ ನಗರಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಬಿಎ ಚುನಾವಣೆ ಸಮೀಪಿಸುತ್ತಿದ್ದು, ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.
‘ಜಿಲ್ಲೆಯಲ್ಲಿ ಪಕ್ಷವು ಶಕ್ತಿಯುತವಾಗಿದೆ. ಏನೇ ವ್ಯತ್ಯಾಸವಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಅದನ್ನು ಚರ್ಚಿಸಿ ಸರಿಪಡಿಸಿಕೊಳ್ಳುತ್ತೇವೆ. ಕಳೆದ ಕಳೆದ ಚುನಾವಣೆಯಲ್ಲಿ ರಾಮನಗರದ ಕಾರ್ಯಕರ್ತರಲ್ಲಿ ಅತಿಯಾದ ವಿಶ್ವಾಸವಿದ್ದಿದ್ದರಿಂದ ಎಡವಿದೆವು. ಇದನ್ನು ಕಾರ್ಯಕರ್ತರು ಸಹ ಒಪ್ಪಿಕೊಳ್ಳುತ್ತಾರೆ’ ಎಂದು ತಿಳಿಸಿದರು.
‘ಮುಂದೆ ಎಲ್ಲವನ್ನು ಸರಿಪಡಿಸಿಕೊಂಡು ಕ್ಷೇತ್ರದಲ್ಲಿ ಮತ್ತೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವಂತೆ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಆ ಬಗ್ಗೆ ಪಕ್ಷ ನಿರ್ಧರಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಎಚ್.ಡಿ. ಕುಮಾರಸ್ವಾಮಿ ಅವರು ನಾಲ್ಕು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅಭಿವೃದ್ಧಿ ದೂರದೃಷ್ಟಿಯೊಂದಿಗೆ ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ’ ಎಂದು ಟೀಕಿಸಿದರು.
‘ಕ್ಷೇತ್ರದ ರಸ್ತೆಗಳ ಸ್ಥಿತಿ ಗಮನಿಸಿದರೆ ಯಾವ ಮಟ್ಟದ ಅಭಿವೃದ್ಧಿ ನಡೆದಿದೆ ಎಂಬುದು ಗೊತ್ತಾಗುತ್ತದೆ. ಜಿಲ್ಲೆಯವರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಪೆನ್ನು ಮತ್ತು ಪೇಪರ್ ಕೇಳಿದ್ದು ಇದಕ್ಕೆನಾ’ ಎಂದು ವಾಗ್ದಾಳಿ ನಡೆಸಿದರು.
‘ಮನರೇಗಾ ಯೋಜನೆ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಬದಲಾವಣೆ ಮಾಡಿರುವುದನ್ನು ಪ್ರಶ್ನಿಸುವ ಕಾಂಗ್ರೆಸ್‌ನವರು, ತುಮಕೂರು ಕ್ರೀಡಾಂಗಣಕ್ಕೆ ಡಾ. ಜಿ. ಪರಮೇಶ್ವರ್ ಹೆಸರು ಯಾಕೆ ಇಟ್ಟರು? ಅಲ್ಲಿಗೆ ಗಾಂಧೀಜಿ ಹೆಸರನ್ನೇ ಇಡಬಹುದಿತ್ತಲ್ಲವೆ? ಕಾಂಗ್ರೆಸ್‌ನವರಿಗೆ ಡಬಲ್ ಸ್ಟ್ಯಾಂಡರ್ಡ್ ಯಾಕೆ’ ಎಂದು ಪ್ರಶ್ನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಮುಖಂಡರಾದ ಬಿ. ಉಮೇಶ್, ಮಂಜುನಾಥ್, ಚಂದ್ರಯ್ಯ, ಜಿ.ಟಿ. ಕೃಷ್ಣ, ಲಕ್ಷ್ಮಿಕಾಂತ್, ವೆಂಕಟೇಶ್, ರವಿ, ಪಾಂಡುರಂಗ, ಹೋಟೆಲ್ ಉಮೇಶ್, ರಾಮಕೃಷ್ಣಯ್ಯ, ಗೂಳಿ ಕುಮಾರ್, ನಂದೀಶ್‌ಗೌಡ, ಕೃಷ್ಣಮೂರ್ತಿ, ಯಕ್ಷರಾಜು, ಶೋಭಾ, ಜೈಕುಮಾರ್, ಕೆಂಪರಾಜು, ಸರಸ್ವತಿ, ನರೇಂದ್ರ ಹಾಗೂ ಇತರರು ಇದ್ದರು.
ಕೇಕ್ ಕತ್ತರಿಸಿ ಸಂಭ್ರಮಾಚರಣೆ
ನಗರಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ನಗರದ ಹೊರವಲಯದ ಸಂಗಬಸವನದೊಡ್ಡಿಯಿಂದ ಬೈಕ್ ರ‍್ಯಾಲಿ ನಡೆಸಿದ ಕಾರ್ಯಕರ್ತರು ಎಸ್‌ಪಿ ಕಚೇರಿ ವೃತ್ತದಿಂದ ತೆರೆದ ವಾಹನದಲ್ಲಿ ನಿಖಿಲ್ ಅವರನ್ನು ಚಾಮುಂಡೇಶ್ವರಿ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕರೆದೊಯ್ದರು. ವಾಟರ್ ಟ್ಯಾಂಕ್ ವೃತ್ತದಲ್ಲಿ ಸೇಬುಗಳಿಂದ ತಯಾರಿಸಿದ ಬೃಹತ್ ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಮುಂದೆ ಅರಳಿಮರದ ವೃತ್ತದಲ್ಲಿ ಕೇಕ್ ಕತ್ತರಿಸಿದ ನಿಖಿಲ್ ನಂತರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ನಾಯಕನಿಗೆ ಜನ್ಮದಿನದ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.