ಸಾಂದರ್ಭಿಕ ಚಿತ್ರ
ರಾಮನಗರ: ರಾಜ್ಯ ಸರ್ಕಾರ ಸೋಮವಾರದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯದವರು ಜಾತಿ ಕಾಲಂ ಮತ್ತು ಉಪ ಜಾತಿ ಕಾಲಂನಲ್ಲಿ ‘ಒಕ್ಕಲಿಗ’ ಎಂದು ಹಾಗೂ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ನಮೂದಿಸಬೇಕು ಎಂದು ರಾಮನಗರ ತಾಲ್ಲೂಕು ಒಕ್ಕಲಿಗರ ಸಂಘ ಸಲಹೆ ನೀಡಿದೆ.
‘ಸಮೀಕ್ಷೆಗೆ ಸಂಬಂಧಿಸಿದಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಒಕ್ಕಲಿಗ ಸ್ವಾಮೀಜಿಗಳು ಹಾಗೂ ಎಲ್ಲಾ ಪಕ್ಷಗಳ ರಾಜಕೀಯ ನಾಯಕರ ಸಭೆಯಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ತೀರ್ಮಾನಿಸಲಾಗಿದೆ’ ಎಂದು ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯೂ ಆದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ತಿಳಿಸಿದರು.
‘ಸಮುದಾಯದವರು ತಪ್ಪದೆ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಬದುಕಿಗಾಗಿ ವ್ಯವಸಾಯ ಬಿಟ್ಟು ಬೇರೇನಾನಾದರೂ ಕೆಲಸ ಮಾಡಿಕೊಂಡಿರಬಹುದು. ಆದರೆ, ಸಮೀಕ್ಷೆ ಸಂದರ್ಭದಲ್ಲಿ ಕುಲ ಕಸುಬು ಕಾಲಂನಲ್ಲಿ ವ್ಯವಸಾಯ ಎಂದೇ ಬರೆಯಿಸಬೇಕು’ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ‘ಸಮೀಕ್ಷೆ ಕುರಿತು ಹಲವರಿಗೆ ಸರಿಯಾದ ಮಾಹಿತಿ ಇಲ್ಲ. ಅರಿವಿಲ್ಲದೆ ಬೇರೆ ಜಾತಿ ಅಥವಾ ಉಪ ಜಾತಿ ಹೆಸರು ನಮೂದಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸಂಘವು ಸಮೀಕ್ಷೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.
‘ಗೌಡ ಎಂಬುದು ಜಾತಿಯಲ್ಲ. ಅದು ಸ್ಥಾನಮಾನದ ಹೆಸರು. ಹಾಗಾಗಿ, ಸಮುದಾಯದವರು ಗೌಡ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಳ್ಳದೆ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಯಿಸಬೇಕು. ಸಮುದಾಯದಲ್ಲಿ ಎಷ್ಟೇ ಉಪ ಪಂಗಡಗಳಿದ್ದರೂ ಒಕ್ಕಲಿಗ ಎಂದೇ ನಮೂದಿಸಬೇಕು. ವಿದ್ಯಾಭ್ಯಾಸವನ್ನು ಸಹ ಸರಿಯಾಗಿ ಬರೆಯಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್, ‘ಸಮೀಕ್ಷೆಯು ಪಾರದರ್ಶಕವಾಗಿ ನಡೆದಾಗ ಮಾತ್ರ ಸಮುದಾಯದ ನಿಖರ ಜನಸಂಖ್ಯೆ ಗೊತ್ತಾಗಲಿದೆ. ಹಾಗಾಗಿ, ಯಾರೂ ಸಮೀಕ್ಷೆಯಿಂದ ಹೊರಗುಳಿಯಬಾರದು’ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ತಮ್ಮಯ್ಯ, ಬಸವರಾಜು, ನಂಜೇಗೌಡ ಎಚ್.ಪಿ., ಖಜಾಂಚಿ ನಂದೀಶ್, ಸಹ ಕಾರ್ಯದರ್ಶಿಗಳಾದ ಬೈರೇಗೌಡ, ಶಿವಪ್ರಕಾಶ್, ಮಹೇಂದ್ರ, ಇತರ ಪದಾಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಮುಖಂಡರಾದ ಪಟೇಲ್ ರಾಜು, ಜಯ ಕರ್ನಾಟಕ ರವಿ, ಬಿ.ಟಿ. ದಿನೇಶ್ ಬಿಳಗುಂಬ, ಗೂಳಿ ಕುಮಾರ್ ಹಾಗೂ ಇತರರು ಇದ್ದರು.
15 ದಿನದಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಿಲ್ಲ. 3 ಕೋಟಿ ಜನಸಂಖ್ಯೆಯ ತೆಲಂಗಾಣದಲ್ಲಿ ಸಮೀಕ್ಷೆಗೆ 90 ದಿನ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲೂ ಅವಧಿ ವಿಸ್ತರಿಸಬೇಕು ಕೆ.ರಾಜು, ಅಧ್ಯಕ್ಷ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.