ADVERTISEMENT

ಜನಪದ ಕಲಾವಿದರಲ್ಲಿ ಸಂಘಟನೆ ಅವಶ್ಯ

ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:55 IST
Last Updated 7 ಫೆಬ್ರುವರಿ 2023, 4:55 IST
ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ರಾಮನಗರ ಜಿಲ್ಲಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಶಿ. ರಾಮಚಂದ್ರೇಗೌಡ, ಎಂ. ಬೈರೇಗೌಡ, ಜೋಗಿಲ ಸಿದ್ದರಾಜು, ಪಾರ್ಥಸಾರಥಿ, ಸರಸವಾಣಿ ಮತ್ತಿತರರು ಪಾಲ್ಗೊಂಡರು
ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ರಾಮನಗರ ಜಿಲ್ಲಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಶಿ. ರಾಮಚಂದ್ರೇಗೌಡ, ಎಂ. ಬೈರೇಗೌಡ, ಜೋಗಿಲ ಸಿದ್ದರಾಜು, ಪಾರ್ಥಸಾರಥಿ, ಸರಸವಾಣಿ ಮತ್ತಿತರರು ಪಾಲ್ಗೊಂಡರು   

ರಾಮನಗರ: ಸುಗಮ ಸಂಗೀತ ಕಲಾವಿದರು ಹಾಗೂ ಜನಪದ ಕಲಾವಿದರಿಗೆ ಅಜಗಜಾಂತರ ವ್ಯತ್ಯಾಸವಿದ್ದು, ಜನಪದ ಕಲಾವಿದರು ಬಲವಾದ ಸಂಘಟನೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಸಲಹೆ ನೀಡಿದರು.

ಜಾನಪದ ಲೋಕದಲ್ಲಿ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ರಾಮನಗರ ಜಿಲ್ಲಾ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಲಾವಿದನಿಗೆ ದೇಶಕಾಲಗಳನ್ನು ಮೀರಿ ಗ್ರಹಿಸುವ ಪ್ರತಿಭೆ ಇರುತ್ತದೆ. ಇಡೀ ಸಮಾಜವನ್ನು ಬಡಿದೆಚ್ಚರಿಸುವ ಶಕ್ತಿಯಿರುತ್ತದೆ. ಮನರಂಜನೆಗಾಗಿ ತಮ್ಮ ಕಲೆ ಪ್ರದರ್ಶಿಸುವುದಕ್ಕಿಂತ, ಮನೋವಿಕಾಸಕ್ಕಾಗಿ ತಮ್ಮ ಕಲೆಗಳನ್ನು ಬಳಸಿಕೊಳ್ಳಬೇಕು ಎಂದರು.

ಜಾನಪದ ವಿದ್ವಾಂಸ ಎಂ. ಬೈರೇಗೌಡ ಮಾತನಾಡಿ, ಈ ತಲೆಮಾರಿನ ಕಲಾವಿದರು ಹಳೆಯ ತಲೆಮಾರಿನ ಕಲಾವಿದರ ಸಾಧನೆ ಸೇವೆಯನ್ನು ಮರೆತುಹೋದಂತಿದೆ. ತಮಗೆ ತಿಳಿದಿರುವುದೇ ಸತ್ಯವೆಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಅದನ್ನೇ ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ. ಚಳವಳಿಗಳು ಮೂಲೆಗುಂಪಾಗಿರುವ ಈ ಕಾಲಘಟ್ಟದಲ್ಲಿ ಹೊಸ ಆಶಾಕಿರಣವಾಗಿ ಈ ಸಂಘಟನೆ ಕಾಣುತ್ತಿದೆ. ಸ್ವಾರ್ಥಬಿಟ್ಟು ಕಲಾವಿದರೆಲ್ಲರ ಸರ್ವಾಂಗೀಣ ಬೆಳವಣಿಗೆಗೆ ಕಟಿಬದ್ಧವಾಗಿ ಅಖಿಲ ಕರ್ನಾಟಕದ ಕಲಾವಿದರ ಒಕ್ಕೂಟ ನಿಲ್ಲಬೇಕು ಎಂದರು.

ADVERTISEMENT

ಅಖಿಲ ಕರ್ನಾಟಕ ಕಲಾವಿದರ ರಾಜ್ಯ ಘಟಕದ ಅಧ್ಯಕ್ಷ ಜೋಗಿಲ ಸಿದ್ಧರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಪಾರ್ಥಸಾರಥಿ, ಕಾರ್ಯದರ್ಶಿ ಗೋವಿಂದರಾಜು, ಗಾಯಕ ಬ್ಯಾಡರಹಳ್ಳಿ ಶಿವಕುಮಾರ್, ಜಾನಪದ ಲೋಕದ ಆಡಳಿತಾಧಿಕಾರಿ ಸರಸವಾಣಿ ಪಾಲ್ಗೊಂಡಿದ್ದರು. ಇದೇ ವೇಳೆ ಕಲಾವಿದರಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.