ಕುದೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಶಾಂತಿಯುತ ಮೆರವಣಿಗೆ ನಡೆಸಿ ಬಸ್ ನಿಲ್ದಾಣದಲ್ಲಿ ಮೃತರಿಗೆ ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದರು.
ಕೆಂಪೇಗೌಡ ಸರ್ಕಲ್‌ನಿಂದ ಆರಂಭವಾದ ಮೆರವಣಿಗೆಯು ಬಸ್ ನಿಲ್ದಾಣದ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಈ ವೇಳೆ ಉಗ್ರರ ವಿರುದ್ಧ ಘೋಷಣೆ ಕೂಗಿದರು. ಕೆಂಪೇಗೌಡ ಸರ್ಕಲ್, ಬಿಜಿಎಸ್ ಸರ್ಕಲ್‌ನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ನಂತರ ಬಸ್ ನಿಲ್ದಾಣದಲ್ಲಿ ಮೃತರಿಗೆ ಮೇಣದ ದೀಪ ಹಚ್ಚಿ ಮೌನಾಚರಣೆ ಮಾಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ.ವೆಂಕಟೇಶ್ ಮಾತನಾಡಿ, ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ದಾಳಿಯು ಹೇಡಿತನದಿಂದ ಕೂಡಿದೆ. ಕೃತ್ಯದ ಹಿಂದಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು, ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಮುಖ್ಯ ಶಿಕ್ಷಕ ಕೇಶವಮೂರ್ತಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ತುಂಬುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬಿಸ್ಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಹೇಲ್ ಮಾತನಾಡಿ, ರಣಹೇಡಿಗಳಿಗೆ ಬುದ್ಧಿ ಕಲಿಸಲು ಸೈನ್ಯ ಸಮರ್ಥವಾಗಿದೆ. ಕೇಂದ್ರ ಸರ್ಕಾರ ಉಗ್ರರ ಹಿಂದಿರುವ ಕಿಡಿಗೇಡಿಗಳಿಗೆ ತಕ್ಕಪಾಠ ಕಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಗಂ.ದಯಾನಂದ್, ಮಂಜೇಶ್ ಕುಮಾರ್, ಹೊನ್ನರಾಜು, ವಿನಯ್ ಗೌಡ, ಕೆ.ಬಿ. ಚಂದ್ರಶೇಖರ್, ಕೃಷ್ಣಮೂರ್ತಿ, ಮಂಜುನಾಥ್, ಮುನಿರಾಜು, ಸುರೇಶ್, ಮಿಥುನ್ ಶೆಟ್ಟಿ, ನಾಗರಾಜು, ರಂಗಸ್ವಾಮಿ, ಜಾವೀದ್, ರಂಗಸ್ವಾಮಯ್ಯ, ಗೋವಿಂದರಾಜು, ಅಣ್ಣಪ್ಪ, ಕೇಶವಮೂರ್ತಿ, ಬಾದೇಗೌಡ, ಮೋಹನ್ ಕುಮಾರ್ ಸೇರಿದಂತೆ ವರ್ತಕರ ಸಂಘದ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.